ಗುಜರಾತ್ : ಗುಜರಾತಿನ ಮೊರ್ಬಿಯಲ್ಲಿ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ದುರಂತ ನಡೆದ ಒಂದು ದಿನದ ನಂತರ, ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಕೆಲವರು ಒರೆವಾದ ಮಧ್ಯಮ ಮಟ್ಟದ ಉದ್ಯೋಗಿಗಳಾಗಿದ್ದು, ಬಹು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದು, ಭಾರೀ ದುರಂತಕ್ಕೆ ಕಾರಣರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೇತುವೆ ದುರಂತದ ನಂತರ ಕಂಪನಿಯ ಹಿರಿಯ ಅಧಿಕಾರಿಗಳು ನಾಪತ್ತೆಯಾಗಿದ್ದು, ಇದು ದೇಶ ಕಂಡ ಅತ್ಯಂತ ಕೆಟ್ಟ ಘಟನೆಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಓರೆವಾ ನಾಗರಿಕ ಸಂಸ್ಥೆಯಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ತೆಗೆದುಕೊಳ್ಳದೆ ನಿಗದಿತ ಸಮಯಕ್ಕಿಂತ ಮೊದಲು ಸೇತುವೆಯನ್ನು ಮತ್ತೆ ತೆರೆದರು ಎನ್ನಲಾಗುತ್ತಿದೆ.
ಮಾರ್ಚ್ನಲ್ಲಿ ಐತಿಹಾಸಿಕ ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ಕಂಪನಿಯನ್ನು ನೇಮಿಸಲಾಯಿತು. ಏಳು ತಿಂಗಳ ನಂತರ ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷವನ್ನು ಆಚರಿಸಿದಾಗ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು.
ನಿರ್ವಹಣೆ ಮತ್ತು ದುರಸ್ತಿಗಾಗಿ ಸೇತುವೆಯನ್ನು ಕನಿಷ್ಠ ಎಂಟರಿಂದ 12 ತಿಂಗಳವರೆಗೆ ಮುಚ್ಚಲು ಕಂಪನಿಯು ತನ್ನ ಒಪ್ಪಂದಕ್ಕೆ ಬದ್ಧವಾಗಿತ್ತು.
ಮೊರ್ಬಿ ಮುನ್ಸಿಪಲ್ ಬಾಡಿ ಮತ್ತು ಒರೆವಾ ಸಮೂಹದ ಭಾಗವಾಗಿರುವ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ನಡುವೆ 15 ವರ್ಷಗಳ ಒಪ್ಪಂದವು 2037 ರವರೆಗೆ ಪ್ರತಿ ವರ್ಷ ಟಿಕೆಟ್ ದರವನ್ನು ಹೆಚ್ಚಿಸಲು ಕಂಪನಿಗೆ ಅವಕಾಶ ಮಾಡಿಕೊಟ್ಟಿತು.
ನಿನ್ನೆ ಸುಮಾರು 500 ಜನರಿಗೆ ಟಿಕೆಟ್ಗಳನ್ನು ಮಾರಾಟ ಮಾಡಲಾಗಿತ್ತು. ಇದರ ಪರಿಣಾಮವಾಗಿ ತೂಗು ಸೇತುವೆ ಮೇಲೆ ಜನಸಂದಣಿಯು ಹೆಚ್ಚಾಗಿತ್ತು. ಸೇತುವೆಯ ಮೇಲಿದ್ದ ಅನೇಕರು ಸಿಸಿಟಿವಿ ದೃಶ್ಯಗಳಲ್ಲಿ ಸೇತುವೆಯನ್ನು ಅಲುಗಾಡಿಸುತ್ತಿರುವುದು ಕಂಡುಬಂದಿದೆ. ಇದು ಕೇವಲ 125 ಜನರ ತೂಕವನ್ನು ತೆಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.
ಕಳೆದ ವಾರ ಸೇತುವೆಯನ್ನು ಪುನಃ ತೆರೆಯುವ ಸಂದರ್ಭದಲ್ಲಿ, ಒರೆವಾ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ಭಾಯ್ ಪಟೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಂಪನಿಯು ಎರಡು ಕೋಟಿಗಳೊಂದಿಗೆ 100 ಪ್ರತಿಶತ ನವೀಕರಣವನ್ನು ಪೂರ್ಣಗೊಳಿಸಿದೆ ಎಂದು ಹೇಳಿದ್ದರು.
ಕಂಪನಿಯು ಸೇತುವೆಯ ಟಿಕೆಟ್ಗಳನ್ನು ಏಕೆ ಮಾರಾಟ ಮಾಡುತ್ತದೆ ಎಂದು ಅವರು ವಿವರಿಸಿದರು. “ನಾವು ಸೇತುವೆಯನ್ನು ಸಾರ್ವಜನಿಕರಿಗಾಗಿ ತೆರೆದಿದ್ದೇವೆ. ಆದ್ದರಿಂದ ನಾವು ಪ್ರವೇಶವನ್ನು ಉಚಿತವಾಗಿ ಇಡಲು ಸಾಧ್ಯವಿಲ್ಲ ಮತ್ತು ಸೇತುವೆಯ ಗಟ್ಟಿತನವನ್ನು ಅತಿಕ್ರಮಿಸಲು ನಾವು ಬಯಸುವುದಿಲ್ಲ, ಆದ್ದರಿಂದ ಪ್ರವೇಶ ಮತ್ತು ಜನಸಂದಣಿಯನ್ನು ಮಿತಿಗೊಳಿಸಲು, ನಾವು ಶುಲ್ಕ ವಿಧಿಸುತ್ತೇವೆ ಎಂದು ಹೇಳಿದ್ದರು.
‘ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪ್ತಿ’ : ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ