ಕೋಲ್ಕತಾ: ಪಶ್ಚಿಮ ಬಂಗಾಳದ ಪುರುಷರನ್ನು ಒಳಗೊಂಡ ಅಧ್ಯಯನವೊಂದು ಹೊರಬಂದಿದ್ದು, ಇದು ಆತಂಕಕಾರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 86 ರಷ್ಟು ಪುರುಷರು ತಂದೆಯಾಗಲು ಸಾಧ್ಯವಾಗದ ಅಪಾಯದಲ್ಲಿದ್ದಾರೆ ಎಂದು ಅಧ್ಯಯನದ ವರದಿ ತೋರಿಸುತ್ತದೆ, ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಇಲ್ಲಿ ಪುರುಷರು ಮಕ್ಕಳನ್ನು ಹೊಂದಲು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.
ಪೂರ್ವ ರಾಜ್ಯದಲ್ಲಿ ಪುರುಷರ ವೀರ್ಯಾಣುಗಳ ಆರೋಗ್ಯವು ಉತ್ತಮವಾಗಿಲ್ಲ ಎಂದು ಅಧ್ಯಯನದಲ್ಲಿ ಕಂಡುಬಂದಿದೆ, ಇದರಿಂದಾಗಿ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲವಂತೆ. ಅಧ್ಯಯನದ ಪ್ರಕಾರ, ಕಳಪೆ ವೀರ್ಯಾಣುವು ಹೆಣ್ಣು ಅಂಡಾಣುಗಳನ್ನು ಫಲವತ್ತಾಗಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒತ್ತಡ, ಆಹಾರ ಮತ್ತು ಕಳಪೆ ದಿನಚರಿ ಮುಖ್ಯವಾಗಿ ವೀರ್ಯಾಣುವಿನ ಕಳಪೆ ಆರೋಗ್ಯಕ್ಕೆ ಕಾರಣವಾಗಿದೆಯಂತೆ.
ಪುರುಷರಿಗೆ ಸಂಬಂಧಿಸಿದ ಈ ಗಂಭೀರ ಅಧ್ಯಯನವನ್ನು 2018 ಮತ್ತು 2021 ರ ನಡುವೆ ದೇಶಾದ್ಯಂತ ಮಾಡಲಾಗಿದೆ. 64,452 ಜೋಡಿಗಳ ಅಧ್ಯಯನವು ಪಶ್ಚಿಮ ಬಂಗಾಳದಲ್ಲಿ ಶೇಕಡಾ 86 ರಷ್ಟು ಪುರುಷರು ಮೂರು ಪ್ರಮುಖ ವೀರ್ಯಾಣು ಅಸಹಜತೆಗಳಲ್ಲಿ ಕನಿಷ್ಠ ಒಂದಕ್ಕೆ ಬಲಿಯಾಗಿದ್ದಾರೆ ಎಂದು ತೋರಿಸಿದೆ. ಈ ವೀರ್ಯಾಣು ಅಸಹಜತೆಗಳು ಬಂಜೆತನಕ್ಕೆ ಕಾರಣವಾಗಿವೆ. ಜನವರಿಯಿಂದ ಅಕ್ಟೋಬರ್ 2022 ರವರೆಗೆ, ರಾಜ್ಯದ ಎರಡು ಸಾವಿರಕ್ಕೂ ಹೆಚ್ಚು (2179) ದಂಪತಿಗಳು ಐವಿಎಫ್ (ಇನ್-ವಿಟ್ರೋ ಫರ್ಟಿಲೈಸೇಶನ್) ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಅಧ್ಯಯನದ ಪ್ರಕಾರ, ಈ ದಂಪತಿಗಳಲ್ಲಿ 61 ಪ್ರತಿಶತದಷ್ಟು ಪುರುಷರು ಆರೋಗ್ಯಕರವಾಗಿಲ್ಲದ ಕಾರಣ ಮಗುವನ್ನು ಹೊಂದಿಲ್ಲ ಎನ್ನಲಾಗಿದೆ.