ಬೆಂಗಳೂರು: ಈಗಾಗಲೇ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳು ತನಿಖೆಗೆ ಬಾಕಿ ಇರುವಾಗ ಬಿಜೆಪಿಯವರು ಹನಿಟ್ರಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಹೇಳುವ ಮೂಲಕ ತಮ್ಮ ತಿಳುವಳಿಕೆಯ ಕೊರತೆಯನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಚಿವರು ಏನೇ ನಡೆದರೂ ಅದನ್ನು ಸಿಬಿಐಗೆ ಕೊಡಿ ಎನ್ನುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ, ತಮ್ಮ ಸರ್ಕಾರದ ಅವಧಿಯಲ್ಲಿ ಸಿಡಿ ಪ್ರಕರಣ ನಡೆದಾಗ ಬಿಜೆಪಿಯವರೆಲ್ಲ ತಡೆಯಾಜ್ಞೆ ತಂದಿದ್ದರು, ಅದರ ಬದಲು ಸಿಬಿಐ ತನಿಖೆಗೆ ವಹಿಸಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಹನಿಟ್ರಾಪ್ ಕುರಿತು ಚರ್ಚೆಯಾಗುತ್ತಿದೆಯೇ ಹೊರತು ಈವರೆಗೆ ಯಾವುದೇ ದೂರು ದಾಖಲಾಗಿಲ್ಲ, ದೂರು ದಾಖಲಾದರೆ ಸಮರ್ಥವಾಗಿ ತನಿಖೆ ನಡೆಸುವುದಕ್ಕೆ ರಾಜ್ಯದಲ್ಲಿ ಸಮರ್ಥರಾಗಿರುವ ಅಧಿಕಾರಿಗಳಿದ್ದಾರೆ, ಇಷ್ಟಕ್ಕೂ ಹನಿಟ್ರಾಪ್ ವಿಷಯ ಬಗ್ಗೆ ಬಿಜೆಪಿಯವರು ಇಷ್ಟು ಆಸಕ್ತಿ ವಹಿಸುವುದಕ್ಕೆ ಕಾರಣವೇನು, ಭಯವೋ, ಕಾಳಜಿಯೋ? ಎಂದು ಕೇಳಿದ್ದಾರೆ.
ಮಾನವಸಂಪನ್ಮೂಲದ ಕೊರತೆ ಇರುವುದರಿಂದ ಅನಗತ್ಯವಾಗಿ ಪ್ರಕರಣಗಳನ್ನು ನಮಗೆ ವಹಿಸಬೇಡಿ ಎಂದು ಸಿಬಿಐ ಹೇಳಿರುವ ಬಗ್ಗೆ ಬಿಜೆಪಿಯವರಿಗೆ ಅರಿವಿದೆಯೇ? ಇಷ್ಟಕ್ಕೂ ಸಿಬಿಐ ತನಿಖೆಗೆ ವಹಿಸಿದರೆ ಮಾನವ ಸಂಪನ್ಮೂಲವನ್ನು ರಾಜ್ಯ ಸರ್ಕಾರವೇ ಒದಗಿಸಿಕೊಡಬೇಕಾಗಿದೆ, 2024ರ ಜುಲೈ 17ರಂದೇ ಸಿಬಿಐ ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿತ್ತು, ರಾಜ್ಯದ ಅಧಿಕಾರಿಗಳಿಗೆ ತನಿಖೆ ನಡೆಸುವ ಸಾಮರ್ಥ್ಯ ಇರುವಾಗ ಸಿಬಿಐ ತನಿಖೆಯ ಅಗತ್ಯ ಏನಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವಹಿಸಿದೆ ಎನ್ನುವುದನ್ನು ಬಿಜೆಪಿಗರು ನೆನಪು ಮಾಡಿಕೊಳ್ಳಲಿ, ಸಿಬಿಐಗೆ ವಹಿಸಿದ ಡಿ ವೈ ಎಸ್ ಪಿ ಗಣಪತಿ ಆತ್ಮಹತ್ಯೆಯ ಪ್ರಕರಣ, ಡಿ.ಕೆ ರವಿ ಆತ್ಮಹತ್ಯೆ ಪ್ರಕರಣ, ಪರೇಶ್ ಮೆಸ್ತಾ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಜ್ಯದ ತನಿಖಾ ಸಂಸ್ಥೆಗಳು ಹೇಳಿದ್ದನ್ನೇ ಸಿಬಿಐ ಕೂಡ ತನ್ನ ತನಿಖಾ ವರದಿಯಲ್ಲಿ ಹೇಳಿದೆ. ಇದು ರಾಜ್ಯದ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಈಗಾಗಲೇ ಸಿಬಿಐ ಮುಂದೆ ರಾಜ್ಯದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ 74ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಇಂತಹ ಸ್ಥಿತಿ ಇರುವಾಗ ಪ್ರಕರಣಗಳ ಗಂಭೀರತೆಯನ್ನು ಮಾಪನ ಮಾಡದೆ ಸಿಬಿಐಗೆ ಕೊಡಿ ಎನ್ನುವುದು ಬಿಜೆಪಿಯವರ ಅಪ್ರಬುದ್ಧತೆಯಲ್ಲದೆ ಇನ್ನೇನು ಎಂದು ಪ್ರಶ್ನೆ ಹಾಕಿದ್ದಾರಲ್ಲದೆ, ಈಗ ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಬಿಜೆಪಿಯವರು ಈ ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿ ಸಿಡಿ ಪ್ರಸ್ತಾಪ ಬಂದಾಗಲೆಲ್ಲ ಕೋರ್ಟಿನಿಂದ ತಡೆಯಾಜ್ಞೆ ತಂದು ಸತ್ಯವನ್ನು ಮುಚ್ಚಿಟ್ಟುಕೊಂಡರೆ ವಿನಃ ಸಿಬಿಐ ತನಿಖೆಗೆ ವಹಿಸಲಿಲ್ಲ, ರಾಜ್ಯದಲ್ಲಿ ಹನಿಟ್ರಾಪ್ ಅನಿಷ್ಠವನ್ನು ಪರಿಚಯಿಸಿದ್ದೇ ಬಿಜೆಪಿಯವರು ಎನ್ನುವುದಕ್ಕೆ ಬಿಜೆಪಿ ಪಕ್ಷದವರ ಹೇಳಿಕೆಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಅಪ್ಪ ಮಕ್ಕಳ ವಿರುದ್ಧ ನಿರಂತರವಾಗಿ ಮಾತನಾಡುವ ಬಿಜೆಪಿ ಶಾಸಕರೊಬ್ಬರಿಗೆ ಸಿಡಿ ಬಿಡುಗಡೆ ಮಾಡುವ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಆ ಶಾಸಕರು ತಡೆಯಾಜ್ಞೆಯನ್ನು ಪಡೆದಿದ್ದರು.
ಬಿಜೆಪಿಯಲ್ಲಿ ಸಿಡಿ ಫ್ಯಾಕ್ಟರಿ ಇದೆ, ಕೆಲವರು ಸಿಡಿ ಇಟ್ಟುಕೊಂಡೇ ಮಂತ್ರಿಯಾಗಿದ್ದಾರೆ ಎಂದೂ ಈ ಶಾಸಕರು ಆರೋಪಿಸಿದ್ದರು. ಈ ಎಲ್ಲಾ ಸಂದರ್ಭಗಳಲ್ಲಿ ಬಿಜೆಪಿಗೆ ಸಿಬಿಐ ನೆನಪಾಗಲಿಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಹಾಕಿದ್ದಾರೆ.
‘ಟಿಕೆಟ್ ಬುಕ್ಕಿಂಗ್’ ನಂತ್ರ ವಾಟ್ಸಾಪ್ ಮೂಲಕ ಫ್ಲೈಯರ್ ಹಕ್ಕು ಕಳುಹಿಸಿ: ಏರ್ ಲೈನ್ಸ್ ಗಳಿಗೆ ‘DGCA’ ನಿರ್ದೇಶನ
BREAKING : ನಾನು ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರ ‘ಫೋನ್ ಟ್ಯಾಪಿಂಗ್’ ಆಗ್ತಿದೆ : ಆರ್ ಅಶೋಕ್ ಸ್ಪೋಟಕ ಹೇಳಿಕೆ!