ಬೀದರ್ : ಇಲ್ಲಿನ ಚಿಟಗುಪ್ಪ ತಾಲೂಕಿನ ಗ್ರಾಮವೊಂದರ ಬಳಿ ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಹಿಳೆಯರು ಮೃತಪಟ್ಟು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ.
ಮೃತ ಮಹಿಳಾ ಕಾರ್ಮಿಕರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಿತ್ತಗುಪ್ಪ ತಾಲೂಕಿನ ಬೇಮಳಖೇಡ ಸರ್ಕಾರಿ ಶಾಲೆಯ ಬಳಿ ಆಟೋರಿಕ್ಷಾ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ಪಾರ್ವತಿ (40), ಪ್ರಭಾವತಿ (36), ಗುಂಡಮ್ಮ (60), ಯಾದಮ್ಮ (40), ಜಗ್ಗಮ್ಮ (34), ಈಶ್ವರಮ್ಮ (55) ಮತ್ತು ರುಕ್ಮಿಣಿ ಬಾಯಿ (60) ಎಂದು ಗುರುತಿಸಲಾಗಿದೆ. ಗಾಯಗೊಂಡ 11 ಜನರಲ್ಲಿ ಎರಡೂವಾಹನಗಳ ಚಾಲಕರು ಸೇರಿದ್ದಾರೆ. ಚಾಲಕರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.