ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68,450 ಹೆಚ್ ಐವಿ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಹಾಗೂ ಹೆಚ್ ಐ ವಿ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರಾಂದೋಲನ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಹೆಚ್ ಐ ವಿ/ಏಡ್ಸ್ ಜೊತೆಗೆ ಗಮನಾರ್ಹವಾದ ಆರೋಗ್ಯ ಸವಾಲನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಹೆಚ್ ಐ ವಿಯೊಂದಿಗೆ ಬದುಕುತ್ತಿರುವ ಎರಡನೇ ಅತಿ ಹೆಚ್ಚು ಜನರನ್ನು ಭಾರತ ಹೊಂದಿದೆ. ಕರ್ನಾಟಕದಲ್ಲಿ ಪ್ರಸ್ತುತ ಸುಮಾರು 1.91 ಲಕ್ಷ ಹೆಚ್ ಐ ವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾ ಎಂದು ಹೇಳಿದ್ದಾರೆ.
ಜನಸಾಮಾನ್ಯರಲ್ಲಿ ಈ ಕುರಿತು ಅರಿವು ಮೂಡಿಸಲು ಎರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಜನಸಾಮಾನ್ಯರಲ್ಲಿ ಹೆಚ್ ಐ ವಿ, ಎಸ್ ಐ ಟಿ ಸೋಂಕು ಹರಡುವ ಬಗ್ಗೆ ಅರಿವು ಮೂಡಿಸುವುದು, ಸುರಕ್ಷಿತ ಅಭ್ಯಾಸಗಳನ್ನು ಉತ್ತೇಜಿಸಿ, ಚಿಕಿತ್ಸಾ ಸೇವೆಗಳನ್ನು ಪಡೆಯುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.