ನವದೆಹಲಿ: ಕಳೆದ ಕೆಲವು ದಿನಗಳ ಹಿಂದೆ ವಾರಕ್ಕೆ 60ರಿಂದ 90 ಗಂಟೆ ಕೆಲಸ ಮಾಡುವ ಅಗತ್ಯದ ಬಗ್ಗೆ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಎಲ್ ಆ್ಯಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯಂ ಅವರ ಸಲಹೆ ಕುರಿತು ದೇಶವ್ಯಾಪಿ ಚರ್ಚೆ ನಡೆದ ಬೆನ್ನಲ್ಲೇ, ವಾರಕ್ಕೆ 60 ಗಂಟೆಗಿಂತ ಹೆಚ್ಚಿನ ದುಡಿಮೆಯು ಸಿಬ್ಬಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಹೇಳಿರು ವುದು ಸಂಚಲನ ಮೂಡಿಸಿದೆ.
ಹೌದು ಉತ್ಪಾದಕತೆಯ ಹೆಸರಲ್ಲಿ ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ.ನಿತ್ಯವೂ ಕುಳಿತಲ್ಲೇ 12 ತಾಸಿಗಿಂತ ಅಧಿಕ ಕೆಲಸ ಮಾಡುವುದು ಮಾನಸಿಕಸ್ವಾಸ್ಥ್ಯಕ್ಕೆ ಅಪಾಯಕಾರಿ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ ಎಂದು ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಆದರೆ ಇಂಥ ಅಭಿಪ್ರಾಯದ ಜೊತೆಜೊತೆಗೇ, ದೇಶದ ಕಾರ್ಮಿಕ ಕಾನೂನುಗಳು ಗರಿಷ್ಠ ಕೆಲಸ ಅವಧಿಗೆ ಹೊಂದಿರುವ ಬಿಗಿ ನಿಯಮಗಳ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. ಇಂಥ ಬಿಗಿ ನಿಯಮಗಳು ಉದ್ಯಮಗಳ ಬೆಳವಣಿಗೆ ಮತ್ತು ವೈಯಕ್ತಿಕವಾಗಿ ಸಿಬ್ಬಂದಿ ಬೆಳವಣಿಗೆಗೂ ಅಡ್ಡಿಯಾಗಿದೆ ಎಂದು ಹೇಳಿದೆ. ಇಂಥ ಎರಡು ಅಭಿಪ್ರಾಯಗಳು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿದೆ.