ಬೆಂಗಳೂರು: ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಗುರಿ ಹಾಕಿಕೊಂಡಿದೆ. ಮೊದಲ ಹಂತದಲ್ಲಿ 500 ಶಾಲೆಗಳನ್ನು ಕೆಪಿಎಸ್ ಆಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದ್ದು, ಡಿಸಿಎಂ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.
ಎನ್‌ಜಿಒ ಸಹಯೋಗ ಹಾಗೂ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಸಮಿತಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕಂದಾಯ ಸೇರಿ 18 ಮಂದಿ ಸಮಿತಿ ಸದಸ್ಯರಾಗಿದ್ದಾರೆ. ಜತೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದು, 8 ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಗಿದೆ.
ಸಮಿತಿ ಕಾರ್ಯವೇನು?
ಮೊದಲು ಶಾಲೆಗಳನ್ನು ಗುರುತಿಸಿ ನಂತರ ನವೀಕರಣದಲ್ಲಿ ತೊಡಗಬೇಕು. ನೂತನ ಕೊಠಡಿಗಳ ನಿರ್ಮಾಣ, ದುರಸ್ತಿ, ಪ್ರಯೋಗಾಲಯ, ಶೌಚಾಲಯ, ಕಾಂಪೌಂಡ್ ನಿರ್ಮಾಣ ಸೇರಿ ಮೊದಲಾದವಕ್ಕೆ ಆದ್ಯತೆ ನೀಡುವುದು.ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಎನ್‌ಎಸ್ ಕ್ಯೂಎಫ್ ಲ್ಯಾಬ್, ಟಿಂಕರಿಂಗ್ ಲ್ಯಾಬ್, ಐಸಿಟಿ ಲ್ಯಾಬ್, ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಕಲಿಕಾ ಕೇಂದ್ರಗಳ ಸ್ಥಾಪನೆ. ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಮುನ್ನ ಪ್ರಸ್ತುತ ಇರುವ ಶಾಲೆಗಳ ಸ್ಥಿತಿ-ಗತಿಗಳನ್ನು ಮೌಲ್ಯಮಾಪನ ಮಾಡಲಿದೆ. ಡಿಎಸ್‌ಇಆರ್‌ಟಿ, ಆರ್‌ಐಇ, ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಸಿಟಿಇಗಳ ಜತೆಗೆ ವಿಷಯ ತಜ್ಞರು ಸಂಸ್ಥೆಗಳ ಸಹಕಾರದೊಂದಿಗೆ ಪರಿಣಾಮಕಾರಿ ತರಬೇತಿಗಳನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.