ಅರುಣಾಚಲ ಪ್ರದೇಶದ :ಶುಕ್ರವಾರ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿದ್ದಾರೆ.
UPDATE : ಅರುಣಾಚಲದಲ್ಲಿ 5 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನ ; 2 ಶವ ಪತ್ತೆ, ಮುಂದುವರೆದ ಕಾರ್ಯಾಚರಣೆ
ಇಬ್ಬರು ಪೈಲಟ್ಗಳು ಸೇರಿದಂತೆ ಐವರು ಎಚ್ಎಎಲ್ ರುದ್ರ ಎಂಬ ಸುಧಾರಿತ ಲಘು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಯಾವುದೇ ರಸ್ತೆಯಿಂದ ಸಂಪರ್ಕವಿಲ್ಲದ ಸ್ಥಳದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಸಂಜೆ ವೇಳೆಗೆ ಐವರ ಮೃತದೇಹಗಳು ಪತ್ತೆಯಾಗಿವೆ.
ಶುಕ್ರವಾರ ಬೆಳಗ್ಗೆ ಲಿಕಾಬಲಿ ಪಟ್ಟಣದಿಂದ ಟೇಕಾಫ್ ಆದ ಹೆಲಿಕಾಪ್ಟರ್ ಸ್ವಲ್ಪ ಸಮಯದ ನಂತರ ಸಿಂಗಿಂಗ್ ಗ್ರಾಮದ ಬಳಿ ಪತನಗೊಂಡಿದೆ. ಟ್ಯೂಟಿಂಗ್ ಪ್ರಧಾನ ಕಛೇರಿಯಿಂದ ಸುಮಾರು 25 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದ ಸ್ಥಳಕ್ಕೆ ಹೋಗಲು ಯಾವುದೇ ಮೋಟಾರು ರಸ್ತೆಗಳಿಲ್ಲದ ಕಾರಣ, ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ಗಳನ್ನು ಕಳುಹಿಸಲಾಗಿದೆ. ಸ್ಥಳೀಯ ಗ್ರಾಮಸ್ಥರೂ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ರುದ್ರ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿದ ದಾಳಿ ಹೆಲಿಕಾಪ್ಟರ್ ಆಗಿದೆ. ಇದು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ನ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ (WSI) Mk-IV ರೂಪಾಂತರವಾಗಿದೆ.
ಈ ತಿಂಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಎರಡನೇ ಹೆಲಿಕಾಪ್ಟರ್ ಅಪಘಾತವಾಗಿದೆ. ಅಕ್ಟೋಬರ್ 5 ರಂದು, ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ತವಾಂಗ್ ಬಳಿ ಮುಂಚೂಣಿ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ, ಸಾಮಾನ್ಯ ಕಾರ್ಯಾಚರಣೆಯ ಸಮಯದಲ್ಲಿ ಪತನಗೊಂಡ ನಂತರ ಒಬ್ಬ ಪೈಲಟ್ ಸಾವನ್ನಪ್ಪಿದರು.