ಬೆಂಗಳೂರು : ಮಲ ಹೊರುವ ಪದ್ಧತಿ ನಿಷೇಧವಿದ್ದರೂ 1993 ರಿಂದ ಇಲ್ಲಿವರೆಗೆ ರಾಜ್ಯದಲ್ಲಿ ಒಟ್ಟು 134 ಪ್ರಕರಣಗಳು ದಾಖಲಾಗಿದ್ದು, ಏಳುಪ್ರಕರಣಗಳಲ್ಲಿ ದೋಷಿಗಳಿಗೆ ಶಿಕ್ಷೆಯಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿ ಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ -2013ರ ನಿಯಮಗಳನ್ನು ರಾಜ್ಯದಲ್ಲಿಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದವು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್.ವಿ. ಕಲಾವತಿ ಅವರ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆಒದಗಿಸಿದರು. ಈವರದಿ ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.
ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ 7,483 ಕಾರ್ಮಿ ಕರನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರ 1,833 ಕಾರ್ಮಿಕರಿಗೆ ತಲಾ 40 ಸಾವಿರ ರು. ಪರಿಹಾರ ಧನ ನೀಡಿದೆ. ಉಳಿದ ಕಾರ್ಮಿಕರಿಗೆ ರಾಜ್ಯ ಸರ್ಕಾರ ತಲಾ 40 ಸಾವಿರ ರು. ಪಾವತಿಸಿದೆ. ಶೌಚಗುಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ ಶಾಲಾ ಸಮವಸ್ತ್ರ, ವಿದ್ಯಾರ್ಥಿ ವೇತನ ನೀಡುವಂತೆ ರಾಜ್ಯ ಸಫಾಯಿ ಕರ್ಮ ಚಾರಿ ಆಯೋಗವು ಸಮಾಜ ಕಲ್ಯಾಣ ಇಲಾಖೆ ಶಿಫಾರಸು ಮಾಡಿದೆ. ರಾಮನಗರ, ಬೆಂಗಳೂರು, ಕಲಬುರಗಿ ಹಾಗೂ ಕೋಲಾರದಲ್ಲಿ ನಡೆದ ಘಟನೆಗಳಲ್ಲಿ ಮೃತ ಕುಟುಂಬದ ಅವಲಂಬಿತ ಸದಸ್ಯರಿಗೆ ಆರ್ಥಿಕ ನೆರವು, ಪರ್ಯಾಯ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ವರದಿಯಲ್ಲಿ ಮಾಹಿತಿ ನೀಡಿದೆ.