ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಸ್ಥೆಯಾದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ಸಾರ್ವಜನಿಕ ಜಾಗೃತಿಗಾಗಿ ಕೈಗೊಂಡ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳಿಂದ ಮೂಲದಲ್ಲಿಯೇ ತ್ಯಾಜ್ಯದ ವಿಂಗಡಣೆಯ ಪ್ರಮಾಣವು ವೃದ್ಧಿಯಾಗಿದ್ದು, ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (ಆರ್.ಡಿ.ಎಫ್-Refused Derived Fuel) ಸಂಗ್ರಹಣೆಯ ಪ್ರಮಾಣದಲ್ಲಿಯೂ ಸಹ ವೃದ್ಧಿಯಾಗಿರುತ್ತದೆ. ಇದು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾಧಿಸಿದ ದಿಟ್ಟ ಕ್ರಮವಾಗಿರುತ್ತದೆ.
ಪ್ರಸ್ತುತ, ಪ್ರತಿದಿನ 350 ಮೆ.ಟನ್ ರಿಂದ 400 ಮೆ.ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (ಆರ್.ಡಿ.ಎಫ್ – Refused Derived Fuel) ಸಂಗ್ರಹಣೆಯಾಗುತ್ತಿದೆ.
* ಅಂದಾಜು 100-150 ಮೆ.ಟನ್ ತ್ಯಾಜ್ಯವನ್ನು ಬಿಡದಿ ಬಳಿಯ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸ್ಥಾವರಕ್ಕೆ ಕಳುಹಿಸಲಾಗುತ್ತಿದೆ.
* 200-250 ಮೆ.ಟನ್ ತ್ಯಾಜ್ಯವನ್ನು ನೆರೆಯ ಕಡಪ ಜಿಲ್ಲೆಯ ಮೆ||ದಾಲ್ಮಿಯಾ ಸಿಮೆಂಟ್ ಲಿಮಿಟೆಡ್ ಘಟಕಕ್ಕೆ ಸಾಗಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇಂದು (ದಿನಾಂಕ:15.12.2025) ಮೊದಲನೇ ದಿನ ಒಟ್ಟು 160 ಮೆ.ಟನ್ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ (ಆರ್.ಡಿ.ಎಫ್ – Refused Derived Fuel)ನ್ನು ಸಾಗಿಸಲಾಗುತ್ತಿದೆ.
* ಮೆ|| ದಾಲ್ಮಿಯಾ ಸಿಮೆಂಟ್ ಲಿಮಿಟೆಡ್ ಸಂಸ್ಥೆಯು ಪ್ರತಿದಿನ 1,000 ಮೆ.ಟನ್ ವರೆಗೂ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್(ಆರ್.ಡಿ.ಎಫ್-Refused Derived Fuel) ತ್ಯಾಜ್ಯವನ್ನು ಸ್ವೀಕರಿಸುವುದಾಗಿ ಬೆಂ.ಘ.ನಿ.ನಿದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ.
* ಮೆ|| ದಾಲ್ಮಿಯಾ ಸಿಮೆಂಟ್ ಲಿಮಿಟೆಡ್ ಸಂಸ್ಥೆಯು ಸದರಿ ಪ್ರಕ್ರಿಯೆಯಲ್ಲಿನ ಇ.ಪಿ.ಆರ್(Extended Producer Responsibility) ಕ್ರೆಡಿಟ್ಸ್ ಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ನೀಡುತ್ತದೆ. ಇದರಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಆರ್ಥಿಕವಾಗಿ ಲಾಭವಾಗಲಿದೆ.








