ಬೆಂಗಳೂರು : ಇತ್ತೀಚ್ಚಿಗೆ ರಾಜ್ಯದ ನಗರ ಭಾಗಗಳಲ್ಲಿ ಅಗ್ನಿ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 329 ಕೋಟಿ ರು. ವೆಚ್ಚದಲ್ಲಿ 17 ನೂತನ ಅಗ್ನಿಶಾಮಕ ಠಾಣೆ ನಿರ್ಮಾಣ ಹಾಗೂ ಹಲವು ಠಾಣೆಗಳ ಉನ್ನತೀಕರಣಕ್ಕೆ ನಿರ್ಧರಿಸಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ವರ್ಷ ಅತ್ತಿಬೆಲೆ ಪಟಾಕಿ ದುರಂತ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರ ಸತತವಾಗಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇದ್ದವು.ಅಲ್ಲದೆ, ಬೇಸಿಗೆಯಲ್ಲಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಆಧುನಿಕ ಉಪಕರಣಗಳನ್ನು ಮತ್ತು ಅಗತ್ಯವಿರುವ ಠಾಣೆಗಳಿಗೆ ಹೆಚ್ಚುವರಿಯಾಗಿ ನೂತನ ವಾಹನಗಳನ್ನು ಖರೀದಿಸಬೇಕು. ಈ ಕೆಲಸಗಳನ್ನು ಫೆಬ್ರವರಿ ಅಂತ್ಯದೊಳಗೆ ಮುಗಿಸಲು ಪ್ರತ್ಯೇಕ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನ್ವಯ ರಾಜ್ಯದ ಅಗ್ನಿಶಾಮಕ ದಳಕ್ಕೆ 2022-23 ರ ಸಾಲಿನಲ್ಲಿ 329 ಕೋಟಿ ರು. ಹಣ ಮಂಜೂರಾಗಿದೆ. ಈ ಹಣದ ಬಳಕೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳದ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಅವರು ಸೋಮವಾರ ವಿಕಾಸಸೌಧದಲ್ಲಿ ಕ್ರಿಯಾಯೋಜನೆ ಮಂಡಿಸಿದರು.
329 ಕೋಟಿ ರು. ಪೈಕಿ ನೂತನ ಠಾಣೆಗಳ ನಿರ್ಮಾಣಕ್ಕೆ 98.97 ಕೋಟಿ ರು, ರಾಜ್ಯ ತರಬೇತಿ ಕೇಂದ್ರದ ಉನ್ನತೀಕರಣಕ್ಕೆ 16.49 ಕೋಟಿ ರು., ಆಧುನಿಕ ಉಪಕರಣಗಳ ಖರೀದಿಗೆ 148.45 ಕೋಟಿ ರು. ಹಾಗೂ ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸಲು 16.50 ಕೋಟಿ ರು. ಬಳಸುವ ಕುರಿತು ಕ್ರಿಯಾ ಯೋಜನೆಯಲ್ಲಿ ಮಂಡಿಸಿದರು.
ಈ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ, ಬೆಳೆಯುತ್ತಿರುವ ಮತ್ತು ಅಗತ್ಯವಿರುವ ನಗರಗಳಲ್ಲಿ ನೂತನ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಿ, ಜನರನ್ನು ಅಗ್ನಿ ಅವಘಡಗಳಿಂದ ಪಾರುಮಾಡಿ. 17 ನೂತನ ಠಾಣೆಗಳ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು. ತುರ್ತು ಅಗತ್ಯವಿರುವ ಕಡೆ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.
ಅಗ್ನಿ ಅವಘಡಗಳಲ್ಲಿ ಮಾತ್ರವಲ್ಲದೆ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದಾಗ ಎನ್‌ಡಿಆರ್‌ಎಫ್ ತಂಡಕ್ಕೆ ಕಾಯುವ ಮೊದಲು ಅಗ್ನಿಶಾಮಕದಳಗಳು ಜನರ ರಕ್ಷಣೆಗೆ ಮುಂದಾಗಬೇಕು. ಅಗ್ನಿಶಾಮಕದಳ ಈವರೆಗೆ ತನ್ನ ಸಿಬ್ಬಂದಿಗಳ ಜೊತೆಗೆ ಸಾವಿರಾರು ಸಾರ್ವಜನಿಕರಿಗೆ, ಸ್ವಯಂಸೇವಕರಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತರಬೇತಿನೀಡಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.