ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡಲು ಸೇರಿದ್ದ 32 ಭಾರತೀಯ ಪ್ರಜೆಗಳು ಈವರೆಗೆ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ. ಕೆಲಸದ ಆಮಿಷಕ್ಕೆ ಒಳಗಾಗಿ ರಷ್ಯಾ ಸೇನೆಗೆ ಸೇರ್ಪಡೆಯಾಗಿದ್ದ ಈ ಯುವಕರು, ಯುದ್ಧಭೂಮಿಯಲ್ಲಿ ಉಕ್ರೇನ್ ಪಡೆಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.
ಆರಂಭದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದ್ದರೂ, ಯುದ್ಧ ತೀವ್ರಗೊಂಡಂತೆ ಮೃತಪಟ್ಟ ಭಾರತೀಯರ ಸಂಖ್ಯೆ ಈಗ 32ಕ್ಕೇರಿದೆ. ಇವರಲ್ಲಿ ಹೆಚ್ಚಿನವರು ಪಂಜಾಬ್, ಹರಿಯಾಣ ಮತ್ತು ಗುಜರಾತ್ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.ರಷ್ಯಾದಲ್ಲಿ “ಹೆಚ್ಚಿನ ಸಂಬಳದ ಕೆಲಸ” ಅಥವಾ “ಸೇನೆಯಲ್ಲಿ ಸಹಾಯಕ ಹುದ್ದೆ” ನೀಡುವುದಾಗಿ ನಂಬಿಸಿ ಏಜೆಂಟ್ಗಳು ಇವರನ್ನು ರಷ್ಯಾಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿಗೆ ಹೋದ ನಂತರ ಅವರಿಗೆ ಬಲವಂತವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಿ ಯುದ್ಧದ ಮುಂಚೂಣಿಗೆ ಕಳುಹಿಸಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ.
ಮೃತಪಟ್ಟ ಭಾರತೀಯರ ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ತರಲು ಭಾರತ ಸರ್ಕಾರವು ರಷ್ಯಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ಪ್ರಕ್ರಿಯೆಯು ಯುದ್ಧದ ಕಾರಣದಿಂದಾಗಿ ವಿಳಂಬವಾಗುತ್ತಿದ್ದು, ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದ ವೇಳೆ ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ್ದರು. ರಷ್ಯಾ ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ತಕ್ಷಣವೇ ಬಿಡುಗಡೆ ಮಾಡಿ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಡಬೇಕೆಂದು ಪುಟಿನ್ ಅವರಿಗೆ ಮನವಿ ಮಾಡಿದ್ದರು.








