ನವದೆಹಲಿ : ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರ ದಲ್ಲಿ ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ದೆಹಲಿಯಲ್ಲಿ ಘೋಷಿಸಿದ್ದ 1 ಕೋಟಿ ಮನೆಗಳಿಗೆ ಸೋಲಾರ್ ಛಾವಣಿ ಅಳವಡಿಸುವ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ಗೆ ಬಜೆಟ್ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ.
ಈ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯುನಿಟ್ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು. ಜೊತೆಗೆ, ಅವರು ಉತ್ಪಾದಿಸಿದ ಹೆಚ್ಚುವರಿ ಸೌರವಿದ್ಯುತ್ತನ್ನು ವಿದ್ಯುತ್ ವಿತರಕ ಕಂಪನಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠೆಯನ್ನು ಉಲ್ಲೇಖಿಸಿದ ಅವರು, ‘ಅಯೋಧೈಯಲ್ಲಿ ನಡೆದ ಐತಿಹಾಸಿಕ ಪ್ರಾಣಪ್ರತಿಷ್ಠೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಯೋಜನೆಯಡಿ ಈ ಕೆಳಕಂಡ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ’ ಎಂದು ಪ್ರಕಟಿಸಿದರು.
ಛಾವಣಿ ಸೌರಶಕೀಕರಣ ಯೋಜನೆಯಡಿ ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ಉಚಿತವಾಗಿ ಅವರೇ ಉತ್ಪಾದಿಸಿದ 300 ಯುನಿಟ್ ಸೌರವಿದ್ಯುತ್ ಲಭಿಸಲಿದೆ. 300ಕ್ಕಿಂತ ಹೆಚ್ಚು ಯುನಿಟ್ ಸೌರವಿದ್ಯುತ್ ಉತ್ಪಾದಿಸಿದರೆ ಅದನ್ನು ಅವರು ವಿದ್ಯುತ್ ವಿತರಕ ಕಂಪನಿಗಳಿಗೆ ಮಾರಾಟ ಮಾಡಬಹುದು.ಈ ಸೌರವಿದ್ಯುತ್ ಬಳಸಿ ಎಲೆಕ್ಟಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು.
ಈ ಯೋಜನೆಯಿಂದ ದೊಡ್ಡ ಸಂಖ್ಯೆಯ ವ್ಯಾಪಾರಿ ಗಳಿಗೆ ಸೌರವಿದ್ಯುತ್ ಘಟಕಗಳನ್ನು ಪೂರೈಸುವ ಹಾಗೂ ಅಳವಡಿಸುವ ಕೆಲಸ ಲಭಿಸಲಿದೆ. ಸೌರಛಾವಣಿ ಯೋಜನೆಯಿಂದ ಉತ್ಪಾದನಾ ಕ್ಷೇತ್ರ ದಲ್ಲಿ ಹಾಗೂ ಸೌರ ಉಪಕರಣಗಳ ಅಳವಡಿಕೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ.