ಬೆಂಗಳೂರು : ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ,ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು.ಅಕ್ರಮವ ಸಂರಕ್ಷಣಾ ಅಧಿನಿಯಮ 1972 ಮತ್ತು ಇತ್ತೀಚೆಗೆ ಅಂದರೆ 2022ರಲ್ಲಿ ಕೇಂದ್ರ ಸರ್ಕಾರ ಈ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ವಯ ಯಾವುದೇ ವನ್ಯಜೀವಿಯ ಅಂಗಾಂಗವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ಸಾಗಾಟ ಮಾಡುವುದು, ಮನೆಯಲ್ಲಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು, ಧರಿಸುವುದು, ವನ್ಯಜೀವಿಗಳ ಮಾಂಸ ಭಕ್ಷಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ವನ್ಯಜೀವಿ (ಸಂರಕ್ಷಣಾ) (ಕರ್ನಾಟಕ ನಿಯಮಗಳು) 1973 ರ ನಿಯಮ 34 (1) ರಡಿಯಲ್ಲಿ ನಿಯಮ ಜಾರಿಯಾದ ಸಂದರ್ಭದಲ್ಲಿ 1973ರಲ್ಲಿ 30 ದಿನಗಳ ಕಾಲ ನಂತರ 2003 ರಲ್ಲಿ ಮತ್ತೊಮ್ಮೆ 180 ದಿನಗಳ ಕಾಲಾವಕಾಶ ನೀಡಿ ತಲತಲಾಂತರದಿಂದ ತಮ್ಮಲ್ಲಿರುವ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಟ್ರೋಫಿಗಳ ಬಗ್ಗೆ ಘೋಷಣೆ ಮಾಡಿ, ಮಾಲೀಕತ್ವದ ಹಕ್ಕಿನ ಪ್ರಮಾಣಪತ್ರ ಪಡೆದು ಇಟ್ಟುಕೊಳ್ಳಲು ಕಾಲಾವಾಕಾಶ ನೀಡಲಾಗಿತ್ತು.
ಆ ರೀತಿ ಪ್ರಮಾಣ ಪತ್ರ ಪಡೆದಿರುವವರಿಗೆ ಈಗಲೂ ಅಂತಹ ವಸ್ತು ಇಟ್ಟುಕೊಳ್ಳಲು ಅವಕಾಶ ಇದೆ. ಆದರೆ ಹಲವು ಜನರಿಗೆ ಈ ಹಿಂದೆ ನೀಡಲಾಗಿದ್ದ ಕಾಲಾವಕಾಶದ ಬಗ್ಗೆ ಸಾರ್ವಜನಿಕ ಮಾಹಿತಿಯ ಕೊರತೆ ಇದ್ದು, ಇದು ಶಿಕ್ಷಾರ್ಹ ಅಪರಾಧ ಎಂಬುದೂ ಬಹುತೇಕರಿಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಗ್ದ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕಾಗಿ ಮತ್ತೊಮ್ಮೆ ವನ್ಯ ಜೀವಿ ಉತ್ಪನ್ನ ಪ್ರಮಾಣೀಕರಣಕ್ಕೆ ಕೊನೆಯ ಅವಕಾಶ ನೀಡಬೇಕು ಎಂಬ ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ಸರ್ಕಾರ 3 ತಿಂಗಳ ಕಾಲಾವಕಾಶ ನೀಡಲು ಇಂದು ಸಚಿವ ಸಂಪುಟದಲ್ಲಿ ಅಂಗೀಕಾರ ನೀಡಿದೆ.
ಹುಲಿ ಉಗುರು ಇರುವ ಸರ ಧರಿಸಿದರೆ ಹುಲಿಯಂತೆ ಬದುಕುತ್ತಾರೆ. ಜಿಂಕೆಯ ಕೊಂಬನ್ನು ಮನೆಯ ಹೊಸ್ತಿಲ ಮೇಲೆ ಕಟ್ಟಿ ಅದರ ಕೆಳಗೆ ನಡೆದಾಡಿದರೆ ಶುಭವಾಗುತ್ತದೆ, ಆನೆಯ ಬಾಲದ ಉಂಗುರ ಧರಿಸಿದರೆ ಐಶ್ವರ್ಯ ಬರುತ್ತದೆ ಎಂದು ನಂಬಿದ್ದಾರೆ. ಈ ನಂಬಿಕೆಯನ್ನೇ ಲಾಭ ಮಾಡಿಕೊಂಡು ಕೆಲವು ಆಭರಣ ತಯಾರಕರು ವನ್ಯಜೀವಿ ಉತ್ಪನ್ನ ಮಾರಾಟ ಮಾಡುತ್ತಿದ್ದರು, ಇದು ಕಳ್ಳಬೇಟೆಗೂ ಇಂಬು ನೀಡಿತ್ತು. ಈ ಹಿನ್ನೆಲೆಯಲ್ಲಿ ವನ್ಯಜೀವಿ ಅಂಗಾಂಗದ ಉತ್ಪನ್ನವನ್ನು ಅಕ್ರಮವಾಗಿ ಇಟ್ಟುಕೊಳ್ಳುವುದು, ಧರಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು.
ಆದರೆ ಕೆಲವರು ಕಾನೂನಿನ ಅರಿವಿಲ್ಲದೆ ಇಂತಹ ಉತ್ಪನ್ನಗಳನ್ನು ತಲ ತಲಾಂತರದಿಂದ ತಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದರೂ 2 ಬಾರಿ ಅವಕಾಶ ನೀಡಿದರೂ ಘೋಷಣೆ ಮಾಡಿಕೊಂಡು ಪ್ರಮಾಣ ಪತ್ರ ಪಡಿದಿರುವುದಿಲ್ಲ. ಈ ಬಗ್ಗೆ ಇಂದು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದ್ದು, ಇಂತಹ ವಸ್ತುಗಳನ್ನು ಸರ್ಕಾರಕ್ಕೆ ಸ್ವಯಂಪ್ರೇರಿತವಾಗಿ ಹಿಂತಿರುಗಿಸಲು ಮಾತ್ರ ಒಂದು ಬಾರಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಅತಿ ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಿ 3 ತಿಂಗಳ ಕಾಲಾವಕಾಶ ನೀಡಲಾಗುವುದು. ರೂಪುರೇಷೆ ಸಿದ್ಧಪಡಿಸಲಾಗುವುದು. ಆ ಅವಧಿಯಲ್ಲಿ ಈ ಹಿಂದೆ 1973ರಲ್ಲಿ ಮತ್ತು 2003ರಲ್ಲಿ ಅಧಿಕೃತ ಘೋಷಣೆ ಮಾಡಿಕೊಂಡು ಹಕ್ಕಿನ ಪ್ರಮಾಣ ಪತ್ರ ಪಡೆಯದವರು ತಮ್ಮಲ್ಲಿ ಹುಲಿ ಉಗುರು, ಆನೆಯ ಬಾಲದ ಉಂಗುರ, ಜಿಂಕೆಯ ಕೊಂಬು, ಆನೆಯ ದಂತ, ಹುಲಿ, ಜಿಂಕೆಯ ಚರ್ಮ, ಕಾಡೆಮ್ಮೆಯ ಕೊಂಬು, ಹುಲಿ, ಸಿಂಹ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಆನೆ ಸೇರಿದಂತೆ ಯಾವುದೇ ವನ್ಯಜೀವಿಯ ಮುಖದ ಸಂಸ್ಕರಿಸಿದ ಅಥವಾ ಸಂಸ್ಕರಿಸದ ಟ್ರೋಫಿ, ಆನೆಯ ದಂತದಿಂದ ಮಾಡಿದ ಅಲಂಕಾರಿಕ ವಸ್ತು ಇತ್ಯಾದಿಗಳು ಇದ್ದಲ್ಲಿ ಅದನ್ನು ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ.
ಈ ಕಾಲಾವಕಾಶ ಮುಗಿದ ತರುವಾಯ ಯಾರಾದರೂ ಇಂತಹ ವನ್ಯಜೀವಿ ಉತ್ಪನ್ನಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರೆ, ಸಾಗಾಟ, ಮಾರಾಟ ಮಾಡಿದರೆ, ಉಡುಗೊರೆ ನೀಡಿದರೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೀಗಾಗಿ ಸರ್ಕಾರ ನೀಡಿರುವ ಈ ಒಂದು ಅವಕಾಶವನ್ನು ಬಳಸಿಕೊಂಡು ಅಘೋಷಿತ ಅಂದರೆ 1973 ಮತ್ತು 2003ರಲ್ಲಿ ಅಧಿಕೃತವಾಗಿ ಘೋಷಿಸಿ ಪ್ರಮಾಣ ಪತ್ರ ಪಡೆಯದ ಎಲ್ಲ ವನ್ಯಜೀವಿ ಉತ್ಪನ್ನಗಳನ್ನು ಇಲಾಖೆಗೆ ಮರಳಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.