ಢಾಕಾ:ಎರಡು ದಿನಗಳ ಹಿಂದೆ ಬಾಂಗ್ಲಾದೇಶದ ಮೈಮೆನ್ಸಿಂಗ್ ಮತ್ತು ದಿನಾಜ್ಪುರ ಜಿಲ್ಲೆಗಳ ಮೂರು ಹಿಂದೂ ದೇವಾಲಯಗಳಲ್ಲಿ ಎಂಟು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಶುಕ್ರವಾರ ವರದಿ ಮಾಡಿದೆ
ಮೈಮೆನ್ಸಿಂಗ್ನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಈ ದಾಳಿಗಳು ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಘಟನೆಗಳ ಭಾಗವಾಗಿದೆ.
ಮೈಮೆನ್ಸಿಂಗ್ನ ಹಲುಘಾಟ್ ಉಪ ಜಿಲ್ಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಪ್ರತ್ಯೇಕ ಘಟನೆಗಳಲ್ಲಿ ಎರಡು ದೇವಾಲಯಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಶಕುವಾಯಿ ಒಕ್ಕೂಟದ ಬೊಂಡರ್ಪಾರಾ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ಎರಡು ವಿಗ್ರಹಗಳಿಗೆ ಹಾನಿಯಾಗಿದೆ ಎಂದು ಹಲುಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಬುಲ್ ಖಯರ್ ಹೇಳಿದ್ದಾರೆ. “ಈ ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ” ಎಂದು ಖಯರ್ ಹೇಳಿದರು.
ಮತ್ತೊಂದು ಪ್ರಕರಣದಲ್ಲಿ, ಬೀಲ್ಡೋರಾ ಒಕ್ಕೂಟದ ಪೋಲಶ್ಕಂಡ ಕಾಳಿ ದೇವಾಲಯದ ವಿಗ್ರಹವನ್ನು ಗುರುವಾರ ಮುಂಜಾನೆ ಧ್ವಂಸಗೊಳಿಸಲಾಗಿದೆ. ಪೋಲಶ್ಕಂಡ ಗ್ರಾಮದ ನಿವಾಸಿ 27 ವರ್ಷದ ಅಲಾಲ್ ಉದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. “ವಿಚಾರಣೆಯ ಸಮಯದಲ್ಲಿ, ಶಂಕಿತನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ” ಎಂದು ಖಯರ್ ಹೇಳಿದರು. ಶಂಕಿತನನ್ನು ಶುಕ್ರವಾರ ಮೈಮೆನ್ಸಿಂಗ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜೈಲಿಗೆ ಕಳುಹಿಸಲಾಯಿತು.