ಬೆಂಗಳೂರು : ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಯಾನಕ ವರದಿಯೊಂದು ಬಹಿರಂಗವಾಗಿದ್ದು, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಪೋರ್ಟಲ್ ಪ್ರಕಾರ, 2023ರ ಜನವರಿಯಿಂದ ನವೆಂಬರ್ ವರೆಗಿನ 11 ತಿಂಗಳಲ್ಲಿ ರಾಜ್ಯದ 28,657 ಬಾಲಕಿಯರು ಗರ್ಭಿಣಿಯರು ಆಗಿದ್ದಾರೆ ಎಂಬ ಭಯಾನಕ ವರದಿ ಬಹಿರಂಗವಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 2,815 ಬಾಲಗರ್ಭಿಣಿಯರು ಬೆಂಗಳೂರಿನಲ್ಲಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 2,254 ಮಂದಿ ಗರ್ಭಿಣಿಯರು ಇದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 2,004 ಬಾಲಕಿಯರು ಗರ್ಭಿಣಿಯರಾಗಿದ್ದರೆ, ಅತೀ ಕಡಿಮೆ ಅಂದರೆ, 56 ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ.
ಬಾಲಕಿಯರು ಗರ್ಭಿಣಿ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೋಕ್ಸೆ ಕಾಯ್ದೆ 2012 ಸೆಕ್ಷನ್ 19ರಡಿ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು. ಆದರೆ, ಈ ಕೆಲಸ ನಡೆದಿಲ್ಲ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸುದ್ದಿ ಮಾಧ್ಯಮ ಒಂದಕ್ಕೆ ತಿಳಿಸಿದರು.
ರಾಜ್ಯದಲ್ಲಿ ಗ್ರಾಮದಿಂದ ರಾಜ್ಯಮಟ್ಟದವರೆಗೆ 59 ಸಾವಿರ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಇದ್ದಾರೆ. ಬಾಲ್ಯ ವಿವಾಹ ತಡೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರು ಸಹ ನಿಯಂತ್ರಣಕ್ಕೆ ಬಂದಿಲ್ಲ ಎಂದರು.
ಶಾರೀರಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಆಗದೇ ವಿವಾಹವಾಗುವ ಬಾಲಕಿಯರಿಗೆ ಹಲವು ಸ್ವರೂಪಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಗರ್ಭಿಣಿಯರಾದರೆ ರಕ್ತಹೀನತೆ ಮತ್ತು ಪೌಷ್ಟಿಕಾಂಶದ ಕೊರತೆ ತಲೆದೋರುತ್ತದೆ. ತಾಯಿ ಮತ್ತು ಮಗು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ ಎಂದರು.
ಬಾಲಕಿಯರು ಗರ್ಭಿಣಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಅವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತೇವೆ. ಬಾಲಕಿಯರು ಗರ್ಭಿಣಿ ಆಗುವುದು ತಡೆಯಬೇಕಿದ್ದರೆ, ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚು ಒತ್ತು ನೀಡಬೇಕು ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಗುಂಡಬಾವಡಿ ಕೆ.ಡಿ ತಿಳಿಸಿದರು.