ಬೆಂಗಳೂರು :ಲಾಲ್ಬಾಗ್ ಬೊಟಾನಿಕಲ್ ಉದ್ಯಾನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.18ರಿಂದ 28ರವರೆಗೆ ‘ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ’ 215 ನೇ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಈ ಕುರಿತಂತೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ| ಶಮ್ಮಾ ಇಟ್ಬಾಲ್ ಅವರು, ಪ್ರದರ್ಶನದಲ್ಲಿ ಸಾರ್ವ ಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಲ್ಕು ಪ್ರಮುಖ ದ್ವಾರಗಳು ಮತ್ತು ಗಾಜಿನ ಗಾಳ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್ಪ್ರೇಮ್ ಮೆಟಲ್ ಡಿಕೆಕ್ಟರ್ಸ್ ಅಳವಡಿಸಲಾಗುವುದು.
ದ್ವಾರಗಳು, ಗಾಜಿನಮನೆ ಮತ್ತು ಪ್ರಮುಖ ಪ್ರದೇಶಗಳಲ್ಲಿ ಹ್ಯಾಂಡ್ಹೆಲ್ತ್ ಮೆಷಿನ್ಸ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. ಉದ್ಯಾನದ ಎಲ್ಲೆಡೆ 136 ಸಿಸಿ ಕ್ಯಾಮೆರಾ ಅಳವಡಿಸಿದ್ದು ಕಣ್ಣಾವಲು ಕಣ್ಣಾವಲು ಇಡಲಾಗುವುದು. ಅವಶ್ಯಕತೆಗೆ ಅನುಗುಣವಾಗಿ ಪೊಲೀಸರು, ಗೃಹರಕ್ಷಕರು, ಭದ್ರತಾ ಸಿಬ್ಬಂದಿ, ಸ್ವಯಂಸೇವಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಅಗ್ನಿಶಾಮಕ ದಳದ ವಾಹನ, 38 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಯ್ದ ಪ್ರದೇಶಗಳಲ್ಲಿ ಪ್ಯಾರಾ ಮೆಡಿಕಲ್ ತಂಡವುಳ್ಳ ಮಿನಿ ಆಸ್ಪತ್ರೆ, ಹಾವು, ಜೇನುನೋಣ, ನಾಯಿಗಳ ಕಚ್ಚುವಿಕೆಗೆ ಸಂಬಂಧಿಸಿದ ಚುಚ್ಚುಮದ್ದು ಇರಿಸಲಾಗಿದೆ. ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಉದ್ಯಾನದಲ್ಲಿ ಪ್ರಸ್ತುತ 10 ಕುಡಿಯುವ ನೀರಿನ ಘಟಕಗಳಿದ್ದು, ಪ್ರದರ್ಶನದ ಅವಧಿಯಲ್ಲಿ ಹೆಚ್ಚುವರಿಯಾಗಿ 8 ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿಯಾಗಿ 5 ಆಯ್ದ ಸ್ಥಳಗಳಲ್ಲಿ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.