ಬೆಂಗಳೂರು : 2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಅರ್ಜಿ ಸಲ್ಲಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, 2025ನೇ ಅಕ್ಟೋಬರ್ 03 ರಿಂದ ನವೆಂಬರ್ 03 ರ ವರೆಗೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ನೋಡಲ್ ಕೇಂದ್ರಗಳಲ್ಲಿ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿತ್ತು.
ಅದರಂತೆ ಅರ್ಜಿ ಸಲ್ಲಿಸಿದವರಲ್ಲಿ 28976 ಅರ್ಹ ಮತ್ತು 6793 ಅಪೇಕ್ಷಿತ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ಜಾಲತಾಣ https://schooleducation.karnataka.gov.in ರಲ್ಲಿ ಪ್ರಕಟಿಸಲಾಗಿದೆ.
ಇವರಲ್ಲಿ 6174 ಮಂದಿ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆ ನೀಡಿದರೂ, ನೋಡಲ್ ಕೇಂದ್ರದವರು ಫೋನ್ ಮೂಲಕ ಸಂಪರ್ಕಿಸಿ ತಿಳಿಸಿ ಹೇಳಿದರೂ ಸಹಾ ದಾಖಲೆಗಳ ಪರಿಶೀಲನೆಯನ್ನು ಮಾಡಿಸಿಕೊಂಡಿರುವುದಿಲ್ಲ. ಆದರೂ ಇವರಿಗೆ ದಾಖಲೆಗಳನ್ನು ಪರಿಶೀಲಿಸಿಕೊಂಡು ಅಪ್‌ಡೇಟ್ ಮಾಡಿಸಿಕೊಳ್ಳಲು ಇನ್ನೊಂದು ಅವಕಾಶವನ್ನು ನೀಡಿ ಈ ಮೂಲಕ ಅಂತಿಮ ಸೂಚನೆಯನ್ನು ನೀಡಲಾಗಿದೆ.
ಈ ಎರಡೂ ಪಟ್ಟಿಗಳಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಪಟ್ಟಿಯಲ್ಲಿ ನೀಡಲಾಗಿರುವ ಕೋಡ್ ಸಂಖ್ಯೆಯನುಸಾರ ಪಟ್ಟಿಯನ್ನು ಪುನಃ ಪರಿಶೀಲಿಸಿಕೊಳ್ಳತಕ್ಕದು ಮತ್ತು ಅದರಲ್ಲಿ ಯಾವುದೇ ತಪ್ಪು ಅಥವಾ ದೋಷ ಇದ್ದರೆ 2025ನೇ ನವೆಂಬರ್ 15 ರೊಳಗೆ ಸಂಬಂಧಿತ ನೋಡಲ್ ಕೇಂದ್ರಕ್ಕೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಸರಿಪಡಿಸಿಕೊಳ್ಳತಕ್ಕದ್ದು.
ಈ ದಿನಾಂಕದ ನಂತರ ಯಾವುದೇ ತಿದ್ದುಪಡಿಯನ್ನು ಮಾಡಲಾಗುವುದಿಲ್ಲ. ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳದ ಹಾಗೂ ಅಗತ್ಯ ತಿದ್ದುಪಡಿಯನ್ನು ಮಾಡಿಸಿಕೊಳ್ಳದ ಆಕ್ಷೇಪಿತ/ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಉಳಿದವರ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರು ಮಾಡಿ ಕಾಲೇಜುಗಳ ಹಂಚಿಕೆಯನ್ನು ಮಾಡಲಾಗುವುದು ಎಂದು ಅಂತಿಮವಾಗಿ ತಿಳಿಸಲಾಗಿದೆ.
ಹಾಗೆಯೇ, ಅಭ್ಯರ್ಥಿಗಳು ಈಗಾಗಲೇ ತಮಗೆ ಬೇಕಾಗುವ ಕಾಲೇಜುಗಳ ಆಯ್ಕೆಯನ್ನು ಮಾಡಿದ್ದು ಅದರಲ್ಲಿ ಏನಾದರೂ ಬದಲಾವಣೆಯನ್ನು ಮಾಡ ಬಯಸಿದರೆ ಆನ್ ಲೈನ್ ಮೂಲಕ ಲಾಗ್ ಇನ್ ಆಗಿ
2025ನೇ ನವೆಂಬರ್ 15 ರೊಳಗೆ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ








