ಕೊರ್ಬಾ (ಛತ್ತೀಸ್ಗಢ) : ತನ್ನೊಂದಿಗೆ ಮಾತನಾಡಲು ನಿರಾಕರಿಸಿದ್ದಕ್ಕೆ 20 ವರ್ಷದ ಯುವತಿಯನ್ನು ವ್ಯಕ್ತೊಯೊಬ್ಬ ಸ್ಕ್ರೂಡ್ರೈವರ್ನಿಂದ ಬರೋಬ್ಬರಿ 51 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಡಿ. 24 ರಂದು ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಒಬ್ಬಳೆ ಇದ್ದಾಗ ಮನೆಗೆ ತೆರಳಿದ್ದ ಆರೋಪಿ ಏಕಾಏಕಿ ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು. ಆಕೆಯ ಕಿರುಚಾಟವನ್ನು ತಡೆಯಲು ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ ಸ್ಕ್ರೂಡ್ರೈವರ್ನಿಂದ 51 ಬಾರಿ ಇರಿದಿದ್ದಾನೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಕೋರ್ಬಾ) ವಿಶ್ವದೀಪಕ್ ತ್ರಿಪಾಠಿ ತಿಳಿಸಿದ್ದಾರೆ.
ಜಶ್ಪುರ್ ಜಿಲ್ಲೆಯವರಾದ ಆರೋಪಿಯು ಮೂರು ವರ್ಷಗಳ ಹಿಂದೆ ಸಂತ್ರಸ್ತೆಯೊಂದಿಗೆ ಪ್ರಯಾಣಿಕ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಯುವತಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಹೀಗೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕೆಲಸಕ್ಕಾಗಿ ಗುಜರಾತಿನ ಅಹಮದಾಬಾದ್ಗೆ ತೆರಳಿದ್ದನು. ಇಬ್ಬರೂ ಫೋನ್ನಲ್ಲಿ ಸಂಪರ್ಕದಲ್ಲಿದ್ದರು. ಕೆಲ ದಿನಗಳಾದ ನಂತರ ಯುವತಿ ಆತನೊಂದಿಗೆ ಫೋನ್ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಳು.ಇದರಿಂದ ಕೋಪಗೊಂಡ ಪಾಪಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗುತ್ತಿದೆ.
ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.