ನವದೆಹಲಿ:ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಡುಗೆ ಅನಿಲ ಮತ್ತು ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಯುಎಇಯಿಂದ (UAE) ಎರಡು ಬೃಹತ್ ಎಲ್ಪಿಜಿ (LPG) ಹಡಗುಗಳು ಮತ್ತು ಸೌದಿ ಅರೇಬಿಯಾದಿಂದ ಒಂದು ತೈಲ ಟ್ಯಾಂಕರ್ ಈಗ ಭಾರತದ ಬಂದರುಗಳತ್ತ ಪ್ರಯಾಣ ಬೆಳೆಸಿವೆ.
ಹೋರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಇರಾನ್ನಿಂದ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ, ಭಾರತೀಯ ಧ್ವಜ ಹೊಂದಿರುವ ‘ಎಂವಿ ಜಗ್ ವಸಂತ್’ (MV Jag Vasant) ಮತ್ತು ‘ಎಂವಿ ಪೈನ್ ಗ್ಯಾಸ್’ (MV Pine Gas) ಎಂಬ ಎರಡು ಎಲ್ಪಿಜಿ ಹಡಗುಗಳು ಯುಎಇ ಬಂದರಿನಿಂದ ಹೊರಟಿವೆ.
ಇದೇ ವೇಳೆ ಸೌದಿ ಅರೇಬಿಯಾದ ಯಾನ್ಬು (Yanbu) ಬಂದರಿನಿಂದ ‘ಎಂಟಿ ಕಲ್ಲಿಸ್ಟಾ’ (MT Kallista) ಎಂಬ ತೈಲ ಟ್ಯಾಂಕರ್ ಒಡಿಶಾದ ಪ್ಯಾರಾದೀಪ್ ಬಂದರಿನತ್ತ ಸಾಗುತ್ತಿದೆ. ಈ ಹಡಗುಗಳು ಅಂತರಾಷ್ಟ್ರೀಯ ಜಲಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ, ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಇವುಗಳಿಗೆ ಪೂರ್ಣ ಪ್ರಮಾಣದ ಭದ್ರತೆ (Escort) ನೀಡಲಿವೆ.








