ಶಿವಮೊಗ್ಗ : ಹೊಸನಗರ ತಾಲ್ಲೂಕಿನ ಅರಮನೆಕೊಪ್ಪದ ಗ್ರಾಮ ವ್ಯಾಪ್ತಿಯ 18 ವರ್ಷದ ಯುವತಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಗೆ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್ ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗಿದೆ. 2019ರಲ್ಲಿ ಮಂಗನ ಕಾಯಿಲೆ ಸ್ಫೋಟಗೊಂಡ ಹಿನ್ನೆಲೆ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಿತ್ತು. ಎರಡು ಅವಧಿಯಿಂದ ಸರಕಾರ ಲಸಿಕೆ ಸಹ ನಿಲ್ಲಿಸಿರುವುದರಿಂದ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ. ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ಚಿಕಿತ್ಸೆ ಪಡೆಯಬಹುದಾದರೂ ಸ್ಕಾö್ಯನಿಂಗ್ ಇತರೆ ಖರ್ಚುಗಳನ್ನು ಸ್ವಂತವಾಗಿ ಭರಿಸಬೇಕಿದೆ. ಕಾಡಂಚಿನ ಬಡ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು ಸರಕಾರ ಚಿಕಿತ್ಸಾ ವೆಚ್ಚ ಭರಿಸಿದರೆ ಆ ಕುಟುಂಬಗಳು ನಿಟ್ಟುಸಿರು ಬಿಡಲಿವೆಯಾಗಿದೆ.