ಬೆಂಗಳೂರು : “ಸಿಎಂ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ನಿಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, “ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು.
ರಾಹುಲ್ ಗಾಂಧಿ ಅವರ ಜತೆ ನನ್ನ ಫೋಟೋ ಹಾಕಿದ್ದೀರಿ, ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ
ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ನಾನು ನಮ್ಮ ಪಕ್ಷದ ನಾಯಕರ ಜೊತೆ ಕರ್ನಾಟಕ ಹಾಗೂ ಅಸ್ಸಾಂ ರಾಜ್ಯಗಳು ಸೇರಿದಂತೆ ಅನೇಕ ರಾಜಕೀಯದ ಬಗ್ಗೆ ಚರ್ಚೆ ಮಾಡಿದೆ. ಮಾಧ್ಯಮಗಳು ಅನಗತ್ಯವಾಗಿ ರಾಹುಲ್ ಗಾಂಧಿ ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ. ಒಂದು ದಿನ ನಾವು ಜೊತೆಯಲ್ಲಿ ಕೂತು ಚರ್ಚೆ ಮಾಡಿರುವ ಫೋಟೋ ವರದಿ ಮಾಡಿದ್ದೀರಿ, ಮರುದಿನ ಭೇಟಿಯೇ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಕಾಲ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.
“ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನೀವುಗಳು (ಮಾಧ್ಯಮ) ಗೊಂದಲ ಸೃಷ್ಟಿಸುತ್ತಿದ್ದೀರಿ. ನಾವು ಈ ವಿಚಾರವಾಗಿ ಚರ್ಚೆ ಮಾಡಿದ್ದು, ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ. ನಾವೆಲ್ಲರೂ ಆ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಈ ಬಗ್ಗೆ ನಾನು ಹಾಗೂ ಸಿಎಂ ಅನೇಕ ಬಾರಿ ಸ್ಪಷ್ಟಪಡಿಸಿದ್ದೇವೆ. ಹೀಗಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ರಾಹುಲ್ ಗಾಂಧಿ ಅವರ ಸಮಯಕ್ಕಾಗಿ ಡಿ.ಕೆ. ಕಾಯುತ್ತಿದ್ದಾರೆ, ರಾಹುಲ್ ಗಾಂಧಿ ಸಮಯ ನೀಡುತ್ತಿಲ್ಲ ಎಂದೆಲ್ಲಾ ವರದಿ ಮಾಡುತ್ತಿದ್ದೀರಿ. ನಾನು ರಾಹುಲ್ ಗಾಂಧಿ ಅವರ ಜೊತೆ ಸಭೆಯಲ್ಲಿ ಭಾಗವಹಿಸಿರುವ ಫೋಟೋವನ್ನು ನೀವೇ ಪ್ರಸಾರ ಮಾಡಿದ್ದೀರಿ. ಇಷ್ಟಾದರೂ ಮಾಧ್ಯಮಗಳು ಊಹಾಪೋಹಕ್ಕೆ ಆಸ್ಪದ ನೀಡುತ್ತಿರುವುದೇಕೆ? ಇದರ ಅಗತ್ಯವಿಲ್ಲ. ಕಾಂಗ್ರೆಸ್ ಒಗ್ಗಟ್ಟಾಗಿದೆ. ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ. ಸಿದ್ದರಾಮಯ್ಯ ಅವರು ಕೂಡ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾನೂ ಅದನ್ನೇ ಹೇಳಿದ್ದೇನೆ. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು, ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ನಾವು ಸಾಗುತ್ತೇವೆ” ಎಂದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರಲು ನಾನು, ಸಿಎಂ ಒಮ್ಮತದ ನಿರ್ಧಾರ
ದೆಹಲಿ ಪ್ರವಾಸದಲ್ಲಿ ರಾಜಕೀಯ, ಪಕ್ಷದ ವಿಚಾರ ಚರ್ಚೆ ಮಾಡುವುದರ ಜೊತೆಗೆ ನಿಮ್ಮ ವಿಚಾರ ಏನಾಯ್ತು ಎಂದು ಕೇಳಿದಾಗ, “ನನ್ನ ವಿಚಾರಲ್ಲಿ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ನಾನು ಹಾಗೂ ಸಿಎಂ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ನಿಮ್ಮ ಟಿಆರ್ ಪಿಗೆ ಎಂದು ಗಡಿಬಿಡಿಯಾಗಿದೆ” ಎಂದು ತಿಳಿಸಿದರು.
ನಿಮ್ಮ ಶಾಸಕರೇ ಚರ್ಚೆ ಮಾಡುತ್ತಾರೆ ಎಂದು ಕೇಳಿದಾಗ, “ಶಾಸಕರಿಗೆ ಆಸೆ ಇರುತ್ತದೆ. ಅದರಲ್ಲಿ ತಪ್ಪೇನಿರುತ್ತದೆ. ಅದನ್ನು ಸರಿಯಲ್ಲ ಎಂದು ಹೇಳಲು ಸಾಧ್ಯವೇ? ನಾವು ಅವರ ಕಿವಿಯಲ್ಲಿ ಏನೋ ಹೇಳಿರುತ್ತೇವೆ. ಅವರು ಖುಷಿಯಿಂದ ಕಾಯುತ್ತಿರುತ್ತಾರೆ” ಎಂದು ತಿಳಿಸಿದರು.
ನೀವು ಬಹಳ ಕಷ್ಟಪಟ್ಟಿದ್ದೀರಿ ಎಂದು ಕೇಳುತ್ತಿದ್ದೇವೆ ಎಂದಾಗ, “ನಾನೊಬ್ಬನೇ ಕಷ್ಟಪಟ್ಟಿಲ್ಲ. ಎಲ್ಲರೂ ಕಷ್ಟಪಟ್ಟಿದ್ದಾರೆ. 224 ಕ್ಷೇತ್ರಗಳಲ್ಲಿ ಕಾರ್ಯಕರ್ತರು ಹಗಲು ರಾತ್ರಿ ದುಡಿದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಾರ್ಯಕರ್ತರು ದುಡಿದಿರುವುದನ್ನು ನಾವು ಸದಾ ಸ್ಮರಿಸಬೇಕು. ಅದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಅವರು ನಮಗೆ ಪ್ರೀತಿ ತೋರಿಸಿದ್ದಾರೆ. ಶಕ್ತಿ ತುಂಬಿದ್ದಾರೆ. ನನ್ನ ಪರವಾಗಿ ಜನ, ಮಾಧ್ಯಮಗಳು, ಬಿಜೆಪಿ, ದಳದವರು ಪ್ರಾರ್ಥಿಸಿ, ಒಳ್ಳೆಯದನ್ನು ಬಯಸುತ್ತಿದ್ದಾರೆ. ಕೆಲವರು ಟೀಕೆಯನ್ನು ಮಾಡುತ್ತಿದ್ದಾರೆ” ಎಂದರು.
ಕಾಂಗ್ರೆಸ್ ನವರೂ ಟೀಕೆ ಮಾಡುತ್ತಿದ್ದಾರಲ್ಲಾ ಎಂದಾಗ, “ಇರಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದರು.
“ಮನರೇಗಾ ಮರುಜಾರಿಗೆ ಸಂಬಂಧಿಸಿದಂತೆ ನಾವೇ ವಿಶೇಷ ಅಧಿವೇಶನ ಕರೆದಿದ್ದೇವೆ. ಕರ್ನಾಟಕದ ಪಾಲಿಗೆ ಮನರೇಗಾ ಮಹತ್ವದ ಯೋಜನೆಯಾಗಿದೆ. ಪ್ರತಿ ವರ್ಷ 6 ಸಾವಿರ ಕೋಟಿ ಕಾಮಗಾರಿ ನಡೆಯುತ್ತದೆ. ಮನರೇಗಾ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಂಡ ರಾಜ್ಯ ಕರ್ನಾಟಕ. ಈ ಯೋಜನೆಯ ಬಹುದೊಡ್ಡ ಫಲಾನುಭವಿ ನನ್ನ ಕ್ಷೇತ್ರ. ಇದನ್ನು ನಾವು ಹೇಳೆ ಬಳಸಿಕೊಂಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.
ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ನಿಮ್ಮ ಸಹೋದರ ಹೇಳಿದ್ದಾರೆ ಎಂದು ಕೇಳಿದಾಗ, “ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮಗಳು ಕೂಡ ಹೇಳುತ್ತಿವೆ. ಜತೆ ಸೇರುವುದು ಒಳ್ಳೆಯ ಸುದ್ದಿ, ಜತೆ ಸೇರಿ ಚರ್ಚೆ ಮಾಡುವುದು ಒಳ್ಳೆಯ ಸುದ್ದಿ” ಎಂದರು.
ಏಪ್ರಿಲ್ ತಿಂಗಳಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನೋಡೋಣ, ಈಗ ಆ ಮಾತು ಯಾಕೆ?” ಎಂದು ತಿಳಿಸಿದರು.
ಒಂದೇ ಬಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಚಿಂತನೆ:
ಜಿಬಿಎ ಚುನಾವಣೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು, ಪಾಲಿಕೆ ಚುನಾವಣೆಗಳು ಯಾವಾಗ ನಡೆಯಬಹುದು ಎಂದು ಕೇಳಿದಾಗ, “ನ್ಯಾಯಾಲಯ ಆದೇಶ ನೀಡಿದೆ. ನಮ್ಮ ಸರ್ಕಾರ ಸಂವಿಧಾನದ 73, 74ನೇ ತಿದ್ದುಪಡಿಗೆ ಬದ್ಧವಾಗಿದೆ. ಯುವಕರಿಗೆ ಅಧಿಕಾರ ನೀಡಬೇಕು, ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು. ಈಗ ಐದು ಪಾಲಿಕೆಗಳಿಂದ 369 ವಾರ್ಡ್ ಗಳನ್ನು ರಚಿಸಲಾಗಿದೆ. ಇನ್ನು ಬೆಂಗಳೂರಿನ ಹೊರವಲಯವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸಲು ನಮ್ಮ ಸರ್ಕಾರ ತೀರ್ಮಿನಿಸಿದೆ. ಇವುಗಳಿಗೆ ಇದ್ದ ಮೀಸಲಾತಿ ಸಮಸ್ಯೆ ಬಗೆಹರಿಸಲು ಸಿಎಂ ಹಾಗೂ ಸಚಿವರು ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಗಳನ್ನೂ ಪಕ್ಷದ ಚಿಹ್ನೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ನಾವಿನ್ನೂ ಆ ಬಗ್ಗೆ ತೀರ್ಮಾನ ಮಾಡಿಲ್ಲ. ಒಂದೇ ಬಾರಿಗೆ ಎಲ್ಲವನ್ನು ನಡೆಸಲು ಚಿಂತನೆ ನಡೆಯುತ್ತಿದೆ” ಎಂದರು.
ಬಿಜೆಪಿ ಸರ್ಕಾರ ತಂದ ಕಾನೂನಿನಲ್ಲಿ ಮತಪತ್ರ ಬಳಕೆಗೆ ಅವಕಾಶ ಕಲ್ಪಿಸಿದೆ
ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಯಂತ್ರ ಹೊರತಾಗಿ ಮತಪತ್ರ ಬಳಸುವ ಬಗ್ಗೆ ಕೇಳಿದಾಗ, “ನನಗೂ ಈ ಬಗ್ಗೆ ಮಾಹಿತಿ ಬಂದಿದೆ. ಇದು ರಾಜ್ಯ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಇದನ್ನು ತೀರ್ಮಾನಿಸುವ ಅಧಿಕಾರ ಅವರಿಗಿದೆ. ಹೀಗಾಗಿ ಇದು ಆಯೋಗಕ್ಕೆ ಬಿಟ್ಟ ವಿಚಾರ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ 2020ರಲ್ಲಿ ತಂದ ಕಾನೂನಿನಲ್ಲಿ ಮತಪತ್ರ ಬಳಸಲು ಅವಕಾಶ ನೀಡಲಾಗಿದೆ. ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಯಾವ ರೂಪದಲ್ಲಿ ಚುನಾವಣೆ ನಡೆಸಲಾಗುವುದು ಎಂಬುದಕ್ಕಿಂತ ಮತದಾನ ನಡೆಯುವುದು ಬಹಳ ಮುಖ್ಯ. ಈಗ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ನಾವು ಈಗಾಗಲೇ ಬಿಎಲ್ಎಗಳ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದರೆ ಅವರಿಗೆ ಮತ್ತೆ ಅವಕಾಶ ಕಲ್ಪಿಸಬೇಕು ಹಾಗೂ ಅವರ ಹಕ್ಕನ್ನು ಅವರಿಗೆ ನೀಡಬೇಕು. ಅಧಿಕಾರಿಗಳ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕಾಗಿಯೇ ಇರುವ ಕಾನೂನು ಚೌಕಟ್ಟಿನಲ್ಲಿ ಚುನಾವಣಾ ಆಯೋಗ ಕೆಲಸ ಮಾಡಲಿದೆ” ಎಂದು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗದ ಮೇಲೆ ಅನುಮಾನದಿಂದ ಮತಪತ್ರ ಬಳಸಲಾಗುವುದೇ ಎಂದು ಕೇಳಿದಾಗ, “ಚುನಾವಣೆ ಮಾಡಲು ನಾವ್ಯಾರು? ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗ. ರಾಜ್ಯ ಚುನಾವಣಾ ಆಯೋಗ ನಮ್ಮ ಸರ್ಕಾರದ ನಿಯಂತ್ರಣಕ್ಕೆ ಬರುವುದಿಲ್ಲ. ಅವರೇ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ” ಎಂದರು.
ಡಿಜಿಪಿ ರಾಮಚಂದ್ರ ಅವರು ಮಹಿಳೆಯರ ಜೊತೆ ಕಚೇರಿಯಲ್ಲಿ ಅಶ್ಲೀಲವಾಗಿ ವರ್ತಿಸಿರುವ ಅನೇಕ ವಿಡಿಯೋ ವೈರಲ್ ಆಗಿವೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯವರನ್ನು ಕೇಳಿ” ಎಂದರು.
ನಾಳೆ ದಾವೋಸ್ ಗೆ ಪ್ರಯಾಣ:
ಮಂಗಳವಾರ ದಾವೋಸ್ ಗೆ ಪ್ರಯಾಣ ಬೆಳೆಸುತ್ತಿದ್ದೀರಾ ಎಂದು ಕೇಳಿದಾಗ, “ಹೌದು, ದೆಹಲಿಯಿಂದ ನನ್ನ ಪ್ರವಾಸಕ್ಕೆ ಅನುಮತಿ ಸಿಕ್ಕಿದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೂಡ ತೆರಳುವಂತೆ ತಿಳಿಸಿದ್ದಾರೆ. ದಾವೋಸ್ ಸಭೆಯಲ್ಲಿ ಭಾಗವಹಿಸಬೇಕು ಎಂದು ನನಗೆ ಕರೆಗಳು ಬರುತ್ತಿವೆ. ನಮ್ಮ ವಿರೋಧ ಪಕ್ಷಗಳ ಸ್ನೇಹಿತರೂ ನನಗೆ ಇದೇ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ತೆರಳುತ್ತಿದ್ದೇನೆ. ರಾಜ್ಯದ ಹಿತದ ವಿಚಾರದಲ್ಲಿ ಕೆಲವೊಮ್ಮೆ ಅವರ ಸಲಹೆಗಳನ್ನು ಸ್ವೀಕರಿಸಬೇಕಲ್ಲವೇ?” ಎಂದು ತಿಳಿಸಿದರು.
ರಾಜಕೀಯಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಅವರ ಮಾತಿನಲ್ಲಿ ಅರ್ಥವಿದೆ. ತಪ್ಪು ಎಂದು ನಾನು ಹೇಳುವುದಿಲ್ಲ. ನಾಳೆ ಬೆಳಗ್ಗೆ ಈ ಪ್ರಶ್ನೆ ಕೇಳಿ” ಎಂದು ಉತ್ತರಿಸಿದರು.
ಒಂದೇ ಬಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್








