ಪುತ್ತೂರು : ಆರ್ಯಾಪು ಗ್ರಾಮದ ಕಮ್ಮಾಡಿ ಎಂಬಲ್ಲಿ 12 ವರ್ಷದ ಹಿಂದೆ ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೊಳಗಾಗಿದ್ದ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ‘ಕನ್ವಿಕ್ಷನ್ ವಾರಂಟ್’ ಆರೋಪಿಗಳಿಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮೋಹನ್‌ಕುಮಾರ್ ಹೆಗ್ಡೆ ಯಾನೆ ಮೋಹನ್ ಮತ್ತು ನರಿಮೊಗರು ಗ್ರಾಮದ ಪ್ರಶಾಂತ್ ಬಂಧಿತರಾಗಿದ್ದಾರೆ.
2012ರಲ್ಲಿ ಆರ್ಯಾಪು ಗ್ರಾಮದ ಕಮ್ಮಾಡಿ ಬಳಿ ಆರೋಪಿಗಳು ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಬ್ಬರಿಗೂ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಅವಧಿ ಮುಗಿದರೂ ಈ ನಡುವೆ ಪಿರ್ಯಾದಿದಾರರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರಿಂದ ನ್ಯಾಯಾಲಯ ಮತ್ತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಕಾರಣದಿಂದ ನ್ಯಾಯಾಲಯ ಅವರಿಬ್ಬರ ವಿರುದ್ಧ ‘ಕನ್ವಿಕ್ಷನ್ ವಾರಂಟ್’ ಆದೇಶ ಹೊರಡಿಸಿತ್ತು. ಸಂಪ್ಯ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ರವಿ ಬಿ.ಎಸ್., ಎಸ್ಐ ಜಂಬೂರಾಜ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆಯಾಗಿದೆ.