ಹರ್ಯಾಣದ ನೂಹ್ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಬಕ್ರೀದ್ (ಈದ್-ಉಲ್-ಅಧಾ) ಪ್ರಾರ್ಥನೆಯ ನಂತರ ಎರಡು ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಘಟನೆಯು ನಿಜಾಮ್‌ಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಹಳೆಯ ವೈಷಮ್ಯದಿಂದಾಗಿ ಈ ಘರ್ಷಣೆ ಉಂಟಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಪ್ರಾರ್ಥನೆಯ ನಂತರ ಜಮೀಲ್ ಮತ್ತು ರಾಮ್ಜಿ ನೇತೃತ್ವದ ಎರಡು ಬಣಗಳ ನಡುವೆ ವಾಗ್ವಾದ ನಡೆದಿದ್ದು, ಅದು ಶೀಘ್ರವೇ ಹಿಂಸಾತ್ಮಕ ಘರ್ಷಣೆಗೆ ತಿರುಗಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದವು ಮತ್ತು ಕೋಲುಗಳು ಹಾಗೂ ಕೊಡಲಿಗಳನ್ನು ಬಳಸಿದವು. ಈ ಘಟನೆಯು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು.
ಮಾಹಿತಿ ತಿಳಿದ ನಂತರ ಅಕೇರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎರಡೂ ಬಣಗಳನ್ನು ಸಮಾಧಾನಪಡಿಸಿದರು. ಅಕೇರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಎಸ್‌ಎಚ್‌ಒ ವೀರೇಂದ್ರ ಕುಮಾರ್ ಮಾತನಾಡಿ, ಈವರೆಗೆ ಯಾವುದೇ ಕಡೆಯಿಂದ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ದೂರು ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಎರಡನೇ ಘರ್ಷಣೆಯು ಸಿಂಗಾರ್ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಎರಡು ಗುಂಪುಗಳ ನಡುವಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಜಗಳ ನಡೆದಿದೆ. ಸಣ್ಣ ಮಟ್ಟದ ವಾಗ್ವಾದವು ಹಿಂಸಾತ್ಮಕವಾಗಿ ಪರಿಣಮಿಸಿದ್ದರಿಂದ ಕನಿಷ್ಠ ಅರ್ಧ ಡಜನ್ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾಹಿತಿ ಪಡೆದ ತಕ್ಷಣ ಬಿಚೋರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಗಾಯಗೊಂಡವರೆಲ್ಲರನ್ನೂ ಪುನ್ಹಾನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಲೆಗೆ ಗಂಭೀರ ಗಾಯವಾಗಿರುವುದರಿಂದ ಆತನನ್ನು ನಲ್ಹಾರ್‌ನ ಶಾಹೀದ್ ರಾಜಾ ಹಸನ್ ಖಾನ್ ಮೇವಾತಿ ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಬಿಚೋರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸುಖ್‌ಬೀರ್ ಅವರು, ತಮಗೆ ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.








