ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ 11 RCB ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅಮಾನತು ವಿಚಾರವಾಗಿ ಸಿಎಟಿ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ನ್ಯಾ. ಎಸ್ ಜಿ ಪಂಡಿತ್ ಹಾಗು ನ್ಯಾ.ಟಿಎಂ ನದಾಫ್ ಅವರ ಪೀಠದಲ್ಲಿ ವಿತರಣೆ ನಡೆಯಿತು.
ವಿಕಾಸ್ ಕುಮಾರ್ ಪರವಾಗಿ ಹಿರಿಯ ವಕೀಲ ಧ್ಯಾನ ಚಿನ್ನಪ್ಪ ವಾದ ಮಂಡಿಸಿದರು. ಪೊಲೀಸರು ಆರ್ಸಿಬಿ ಸೇವಕರಂತೆ ವರ್ತಿಸಿದ್ದಾರೆ ಎಂಬ ವಾದ ದುರದೃಷ್ಟಕರ. ಯಾವುದೇ ದಾಖಲೆಗಳಿಲ್ಲದೆ ಪೊಲೀಸರನ್ನು ಅಮಾನತು ಮಾಡಲಾಗಿದೆ. ಜೂನ್ ಮೂರರಿಂದಲೇ ಸಂಭ್ರಮಾಚರಣೆ ಶುರುವಾಗಿ ಪೊಲೀಸರು ಕರ್ತವ್ಯದಲ್ಲಿದ್ದರು. ಸ್ವಾಗತಿಸಲು ಯಾರು ಏರ್ ಪೋರ್ಟ್ ಗೆ ಹೋಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ.
ಬಂದೋಬಸ್ತ್ ಮಾಡಿದ್ದರು ಸರ್ಕಾರ ದೋಷ ಹುಡುಕುತ್ತಿದೆ. ಬಂದೋಬಸ್ತ್ ಮಾಡಿರದಿದ್ದರೂ ಪೊಲೀಸರನ್ನೇ ದೂಷಿಸುತ್ತಿದ್ದರು. ಸರ್ಕಾರಕ್ಕೆ ಮುಜುಗರ mವೆಂದು ಯಾರನ್ನೊ ಅಮಾನತು ಮಾಡಲಾಗದು. ಪೊಲೀಸ್ ಆಯುಕ್ತರೆ ಬಂದೋಬಸ್ತ್ ನಿಭಾಯಿಸುತ್ತಿದ್ದರು. ವಿಕಾಸ್ ಕುಮಾರ್ ಬೇರೆ ಯಾವ ಮೇಲಾಧಿಕಾರಿ ಒಪ್ಪಿಗೆ ಪಡೆಯಬೇಕಿತ್ತು? ತನಿಖೆಯ ವರದಿ ಬರುವ ಮೊದಲೇ ಅಮಾನತು ಸರಿ ಇಲ್ಲವೆಂದು ವಾದ ಮಂಡಿಸಿದರು. ಈ ವೇಳೆ ವಿಚಾರಣೆ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಜುಲೈ 21ಕ್ಕೆ ಮುಂದೂಡಿತು.