ಶಿವಮೊಗ್ಗ : ಶಿಕ್ಷಕ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದು ನೀಡಿದ್ದು, ಹಂತ ಹಂತವಾಗಿ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಈ ವರ್ಷ ಸುಮಾರು 10 ಸಾವಿರ ಸರ್ಕಾರಿ ಶಿಕ್ಷಕರ ನೇಮಕ ಮಾಡಲಾಗುವುದು. ಅನುದಾನಿತ ಶಾಲೆಗಳಿಗೂ 2020 ರಿಂದ ಮಂಜೂರಾತಿ ನೀಡಲು ಮತ್ತು ಅವರ ಅಭಿವೃದ್ದಿಗಾಗಿ ಪ್ರಯತ್ನಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ 2022-23 ನೇ ಸಾಲಿನಲ್ಲಿ ಎಸ್ ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಹಾಗೂ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್‍ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ 3 ಮತ್ತು ತಾಲ್ಲೂಕುಗಳಿಂದ ತಲಾ 3 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು ಹಾಗೂ 2023-24 ನೇ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕ/ಶಿಕ್ಷಕರನ್ನು ಅಭಿನಂದಿಸಲಾಯಿತು.
ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಸುಂದರೇಶ್ ಮಾತನಾಡಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿದರು. ಕಾರ್ಯಕರಮದಲ್ಲಿ ಜಿ.ಪಂ ಸಿಇಒ ಎನ್.ಹೇಮಂತ್, ಶಿಕ್ಷಕರ ಸಂಘದ ಸಿದ್ದಬಸಪ್ಪ, ಧರ್ಮಪ್ಪ, ರಾಘವೇಂದ್ರ, ಹರಿಪ್ರಸಾದ್, ಬಿಇಓ, ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.