ವಾಹನ ಹಾಗೂ ಸಂಚಾರ ವಿಚಾರವಾಗಿ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ಬಿಎಸ್-6 ಮಾಲಿನ್ಯ ಮಾನದಂಡಗಳ ಅಡಿಯಲ್ಲಿ ಅನುಮೋದನೆ ಪಡೆಯುವ ವಾಹನಗಳಿಗೆ ಮಾಲಿನ್ಯ ಪರೀಕ್ಷೆ ಅಥವಾ ಹೊಗೆ ಪರೀಕ್ಷೆ ನಡೆಸಲು ಹೊಸ ನಿಯಮಗಳನ್ನು ಹೊರಡಿಸಿದೆ.
ಸಾರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಇನ್ಮುಂದೆ ಫ್ಲೆಕ್ಸ್-ಇಂಧನ ಆಯ್ಕೆಯನ್ನು ಹೊಂದಿರುವ ಎಲ್ಲಾ ದ್ವಿ-ಇಂಧನ ವಾಹನಗಳು ಅನಿಲ ಮಾಲಿನ್ಯಕಾರಕ ಮತ್ತು ಕಣ ಮಾಲಿನ್ಯಕಾರಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವಾಹನವು ಹೈಡ್ರೋಜನ್ ನಲ್ಲಿ ಚಲಿಸುತ್ತಿದ್ದರೆ, NOX ಹೊರಸೂಸುವಿಕೆಯ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತದೆ. ಅಂದಹಾಗೆ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಶೇಕಡಾ 7 ರಷ್ಟು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಡೀಸೆಲ್ (ಬಿ 7) ಗಾಗಿ ಪರೀಕ್ಷಿಸಲಾಗುವುದು ಮತ್ತು ಶೇಕಡಾ 7 ಕ್ಕಿಂತ ಹೆಚ್ಚು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಮಿಶ್ರಣದ ಪ್ರಕಾರ ಪರೀಕ್ಷಿಸಲಾಗುವುದು ಎಂದು ಮಾಹಿತಿ ನೀಡಿದೆ.