ಬೆಂಗಳೂರು : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೂಡ ಕಮಿಷನ್ ಆರೋಪ ಮಾಡಿದ್ದು ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎಂಟು ತಿಂಗಳಿಂದ ನಿರಂತರವಾಗಿ ಕಮಿಷನ್ ಪಡೆಯುತ್ತಿದ್ದಾರೆ. ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಇದು ಲೂಟಿಕೋರರ ಸರ್ಕಾರ ಎಂಬುದು ಸಾಬೀತು ಆಗಿದೆ ಎಂದು ಅವರು ಕಿಡಿ ಕಾರಿದರು.
ಹಿಂದೆ ಸಿದ್ದರಾಮಯ್ಯ ಪಿಸಿಎಂ ಪೋಸ್ಟರ್ ಅಂಟಿಸಿದ್ದರು. ನಿಮ್ಮ ಮುಖದ ಮೇಲೆ ಯಾವ ಪೋಸ್ಟರ್ ಅಂಟಿಸಿಕೊಳ್ತೀರಾ? ಈಗ ಪೆಸಿದ್ದರಾಮಯ್ಯ ಅಂತ ಪೋಸ್ಟರ್ ಅಂಟಿಸಿಕೊಳ್ಳುತ್ತೀರಾ? ಎಲ್ಲಾ ಮಂತ್ರಿಗಳು ಅವರವರ ಹೆಸರಲ್ಲಿ ಟ್ಯಾಕ್ಸ್ ಹಾಕಿಕೊಂಡಿದ್ದಾರೆ ಸಿದ್ದರಾಮಯ್ಯ ಹೇಳೋದು ಆಚಾರ ಮನೆ ಮುಂದೆ ಬೃಂದಾವನ ಎಂದು ಆಕ್ರೋಶ ಹೊರಹಾಕಿದರು.
ಪಂಚರಾಜ್ಯ ಚುನಾವಣೆಗೆ ದುಡ್ಡು ಲೂಟಿ ಮಾಡಿ ಕಳಿಸಿದ್ದಾಯಿತು. ಈಗ ಲೋಕಸಭಾ ಚುನಾವಣೆಗೂ ಲೂಟಿ ಮಾಡಿ ಕಳಿಸುತ್ತಿದ್ದೀರಾ? ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು .