ಬೆಳಗಾವಿ : ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಎಕ್ಸ್ಟ್ರಾ ಪೆಗ್ ಹೆಚ್ಚುವರಿ ಕುಡಿಯಬೇಕು ಎಂದು ಸಂಜಯ ಪಾಟೀಲ್ ಹೇಳಿಕೆಗೆ ಲಕ್ಷೀ ಹೆಬ್ಬಾಳ್ಕರ್ ಆಕ್ರೋಶಗೊಂಡಿದ್ದು, ಸಂಜಯ ಪಾಟೀಲ ನೀಡಿದ ನೀಚತನದ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ ಎಂದು ಕಿಡಿ ಕಾರಿದ್ದಾರೆ.
ಪ್ರಚಾರಕ್ಕಾಗಿ ನೀಚತನದ, ಕೀಳು ಮಟ್ಟದ ಹೇಳಿಕೆ ನನ್ನ ಬಗ್ಗೆ ಸಂಜಯ್ ಪಾಟೀಲ್ ನೀಡಿದ್ದಾರೆ. ಕರ್ನಾಟಕ ರಾಜ್ಯದ ಮಹಿಳೆಯರು ಮಕ್ಕಳನ್ನು ನಿಭಾಯಿಸುವ ಸಚಿವೆಗೆ ಇವರು ಈ ರೀತಿ ಹೇಳಿಕೆ ನೀಡ್ತಾರೆ. ಈ ಮೂಲಕ ಬಿಜೆಪಿಯವರಿಗೆ ಮಹಿಳೆಯರು ಮತ್ತು ಮಹಿಳಾ ಕುಲದ ಬಗ್ಗೆ ಇರು ಗೌರವ ಎಷ್ಟು ಎನ್ನುವುದು ತೋರಿಸುತ್ತೆ. ಬಿಜೆಪಿಯವರ ಅಜೆಂಡಾ ಏನು ಎನ್ನುವುದು ಈ ಮೂಲಕ ಗೊತ್ತಾಗುತ್ತೆ ಎಂದರು.
ಸಂಜಯ್ ಪಾಟೀಲ ಹೇಳಿಕೆಯನ್ನು ವೇದಿಕೆ ಮೇಲೆಯೇ ಬಿಜೆಪಿ ನಾಯಕರು ಖಂಡಿಸಬೇಕಿತ್ತು. ಖಂಡಿಸಿದ್ರೆ ಬಿಜೆಪಿಯವರು ಹೆಣ್ಣಿಗೆ ಗೌರವ ಕೊಡ್ತಾರೆ ಎಂದಾಗುತ್ತಿತ್ತು. ಆದರೆ ಇವತ್ತು ಬಿಜೆಪಿಯವರ ಮುಖವಾಡ ಕಳಚಿದೆ.ನಾನು ರಾಜ್ಯದ ಮಹಿಳೆಯರಿಗೆ ಕರೆ ನೀಡ್ತಿನಿ ಇಂತಹ ಹಿಡನ್ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿಗೆ ಧಿಕ್ಕಾರ ಕೂಗಬೇಕು. ಸಂಜಯ್ ಪಾಟೀಲ್ ಅವರ ಹೇಳಿಕೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಂಸದೆ ಮಂಗಳಾ ಅಂಗಡಿ ನಕ್ಕರು. ಇದು ಬಿಜೆಪಿಯ ಹಿಡನ್ ಅಜೆಂಡಾ ಎಂಬುದನ್ನು ತೋರಿಸುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಂಜಯ್ ಪಾಟೀಲ್ ಹೇಳಿದ್ದೇನು?
ಶನಿವಾರ ಹಿಂಡಲಗಾದಲ್ಲಿ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್, ‘ಅಕ್ಕನ ಕ್ಷೇತ್ರದಲ್ಲಿಯೇ ಬಿಜೆಪಿ ಸಮಾವೇಶದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದ್ದಾರೆ. ಅಕ್ಕ ನಿದ್ದೆಗೆಡುವುದು ಗ್ಯಾರಂಟಿ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಎಕ್ಸ್ಟ್ರಾ ಪೆಗ್ ಹೆಚ್ಚುವರಿ ಕುಡಿಯಬೇಕು ಎಂದು ಹೇಳಿದ್ದರು.