ರಾಯಚೂರು : ಮಂತ್ರಾಲಯಕ್ಕೆ ಮಾರ್ಗ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂತ್ರಾಲಯ ಪ್ರವೇಶದ ಮುಖ್ಯ ದ್ವಾರದ ಬಳಿ ಇಂದು ಶ್ರೀ ಅಭಯ ರಾಮನ 36 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಭಯ ರಾಮನ ವಿಗ್ರಹದ ಎದುರೇ ಅಭಯಾಂಜನೇಯ ಸ್ವಾಮಿಯ 32 ಅಡಿಯ ಏಕಶಿಲಾ ವಿಗ್ರಹವಿದೆ. ಇದರ ಎದುರಿಗಿನ ಸುಮಾರು ಆರು ಎಕರೆ ಪ್ರದೇಶದಲ್ಲಿ ಶ್ರೀಅಭಯ ರಾಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಇಂದು ಅಭಯರಾಮನ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. 36 ಅಡಿ ಎತ್ತರದ ಭವ್ಯವಾದ ಶ್ರೀ ಅಭಯ ರಾಮ ಮೂರ್ತಿಯ ಕೆತ್ತನೆ ಪ್ರಕ್ರಿಯೆ ವರ್ಷಗಳ ಬಳಿಕ ಪೂರ್ಣಗೊಂಡಿದೆ. ಹೀಗಾಗಿ ಮೇರುಕೃತಿಯನ್ನು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಹೋರಭಾಗದ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಮಹತ್ವದ ಸಂದರ್ಭದಲ್ಲಿ ಸ್ವಾಮೀಜಿ ಅವರು ಪೀಠದ ಮೇಲೆ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಇದಕ್ಕೂ ಮೊದಲು ಶ್ರೀಗಳು ಆಧ್ಯಾತ್ಮಿಕ ಮಹತ್ವದ ಕೆಲವು ಆಚರಣೆಗಳನ್ನು ನಡೆಸಿ ನಂತರ ಪ್ರತಿಷ್ಠಾಪನೆ ಮಾಡಿದರು. ಶ್ರೀ ಅಭಯ ರಾಮನ 36 ಅಡಿ ಎತ್ತರದ ಏಕಶಿಲಾ ಮೂರ್ತಿ ಕೆತ್ತನೆ ಕಾರ್ಯದ ಹಿಂದೆ 10 ಜನ ಶಿಲ್ಪಿಗಳ ತಂಡದ ಶ್ರಮವಿದೆ. ಆಂಧ್ರಪ್ರದೇಶದ ಕುಪ್ಪಂನ 10 ಮಂದಿ ಶಿಲ್ಪಿಗಳ ತಂಡ ಶ್ರೀರಾಮನ ಏಕಶಿಲಾ ವಿಗ್ರಹವನ್ನು ಕೆತ್ತನೆ ಮಾಡಿದೆ. ಯಮಿಗನೂರು ರಸ್ತೆಯ ಬಳಿ ಜುಲೈ 23 ರಂದು ಆಂಧ್ರಪ್ರದೇಶದ ಜೈ ಶ್ರೀ ರಾಮ್ ಫೌಂಡೇಶನ್ ವತಿಯಿಂದ 108 ಅಡಿ ಎತ್ತರದ ಬೃಹತ್ ಪಂಚಲೋಹದ ರಾಮನ ಮೂರ್ತಿ ಸ್ಥಾಪನೆಗೆ ಭೂಮಿಪೂಜೆ ಸಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಮೂಲಕ ಈ ಪವಿತ್ರ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಂತ್ರಾಲಯ ಆಡಳಿತ ಮಂಡಳಿ ಶೀಘ್ರದಲ್ಲೇ ಈ ಕಾರ್ಯವನ್ನು ಮುಗಿಸುವ ಚಿಂತನೆಯಲ್ಲಿದೆ. 2021ರ ಮಾರ್ಚ್ ತಿಂಗಳಲ್ಲಿ ಶ್ರೀ ಅಭಯ ರಾಮನ ವಿಗ್ರಹ ಕೆತ್ತನೆ ಆರಂಭವಾಗಿತ್ತು. ವಿಗ್ರಹ ಕೆತ್ತನ ಕಾರ್ಯದ ವೇಳೆಯೇ ಆಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ ವೇಳೆ ಈ ರಾಮನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತದೆ ಅಂತ ಮಂತ್ರಾಲಯ ಪೀಠಾಧಿಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರು ಹೇಳಿದ್ದರು. ಅದರಂತೆ ಮಂತ್ರಾಲಯದ ಅಭಯರಾಮನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆಗೊಂಡಿದೆಯಾಗಿದೆ.