ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್‌ವೇನಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ತಿಳಿದುಬಂದಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದರೆ, ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುವ ಜಿಪಿಎಸ್ ಸಾಧನದ ಮೂಲಕ ಟೋಲ್ ಸಂಗ್ರಹವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ವಾಹನಗಳು ಎಕ್ಸ್‌ಪ್ರೆಸ್‌ವೇ ಪ್ರವೇಶಿಸುವ ಮತ್ತು ನಿರ್ಗಮಿಸುವ ಸ್ಥಳಗಳ ಮಾಹಿತಿ ಜಿಪಿಎಸ್ ಸಾಧನದಿಂದ ದಾಖಲಾಗುತ್ತದೆ. ವಾಹನಗಳ ಸಂಚಾರದ ಅಂತರದ ಅನುಗುಣವಾಗಿ ಟೋಲ್ ಕಡಿತವಾಗುತ್ತದೆ. ಇದರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ಕಡಿಮೆ ದೂರ ಕ್ರಮಿಸುವ ವಾಹನಗಳಿಗೆ ಹೆಚ್ಚು ಟೋಲ್ ನೀಡುವುದು ತಪ್ಪುತ್ತದೆ ಎಂದು ಮಾಹಿತಿ ದೊರಕಿದೆ.