ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸಂಕಷ್ಟದಲ್ಲಿದ್ದು ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು ಪೆನ್ ಡ್ರೈವ್ ಹಿನ್ನೆಲೆ ಏನೆಂದು ಬಿಚ್ಚಿಡಬೇಕಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪದೇ ಪದೇ ನಿಲುವು ಬದಲಿಸುತ್ತಿರುವುದು ಯಾಕೆ? ಪೆನ್‌ಡ್ರೈವ್ ಹಿನ್ನೆಲೆ ಏನು ಎಂದು ನಾವು ಬಿಚ್ಚಿಡಬೇಕಾ? ಎಂದು ಉಪಮುಖ್ಯಮಂತ್ರಿ ಶಿವಕುಮಾರ್‌ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರೇ ಮೇ 7 ರವರೆಗೆ ಯಾಕೆ ಕಾಯಬೇಕು? ಇದರ ಮೂಲ ಏನು? ಇದರ ಹಿನ್ನೆಲೆ ಏನು? ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ನಾವು ಬಿಚ್ಚಿ ಇಡಬೇಕಾ? ಇದು ಅವರ ಕುಟುಂಬದ ಆಂತರಿಕ ವಿಚಾರ. ಈ ಬಗ್ಗೆ ಮಾಧ್ಯಮದವರು ಮದವರು ವಿಶ್ಲೇಷಣೆ ಮಾಡಿದ್ದಾರೆ. ಇದರ ಹಿಂದೆ ಏನೇನಾಗಿದೆ ಎಂದು ನಾವೂ ಬಿಚ್ಚಿಡುತ್ತೇವೆ.ಮೇ 7ರ ನಂತರ ಈ ಪ್ರಕರಣ ಎಲ್ಲಿಗೆ ಹೋಗುತ್ತೆ ಎಂದು ಎಲ್ಲರಿಗೂ ಗೊತ್ತು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಪೆನ್‌ಡ್ರೈವ್ ಅವರ ಕುಟುಂಬದ ವಿಚಾರ. ಆದರೆ ಕುಮಾರಸ್ವಾಮಿ ಮಾತು ಆಗಾಗ್ಗೆ ಬದಲಾಗುತ್ತಲೇ ಬಂದಿದೆ. ಈಗ ಪೆನ್‌ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಅವರು ಗಂಟೆಗೊಂದು, ಗಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ನಿಲುವು ಬದಲಿಸುತ್ತಿದ್ದಾರೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರೇ ‘ಉಪ್ಪು ತಿಂದವರು ನೀರು ಕುಡಿಯಬೇಕು, ನಮ್ಮ ಕುಟುಂಬ ಬೇರೆ, ಅವರ ಕುಟುಂಬ ಬೇರೆ’ ಎಂದು ಹೇಳಿದ್ದಾರೆ. ಹಿಂದೆ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೂ ಅವರೇ. ಪ್ರಜ್ವಲ್‌ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದು ಅವರೇ. ಆದರೆ ಕುಮಾರಸ್ವಾಮಿ ಈಗ ತಮ್ಮ ನಿಲುವು ಬದಲಿಸುತ್ತಿರುವುದೇಕೆ? ಎಂದು ಕಿಡಿಕಾರಿದ್ದಾರೆ.