ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗೃಹಿಣಿಯರಿಗೆ ಕೆಲಸಗಳಿರುವುದು ಸಹಜವಾದದ್ದು. ಅದರಲ್ಲಿಯೂ ಮನೆಯ ಕೆಲಸದ ಜೊತೆಗೆ ಆಫೀಸ್ ಕೆಲ್ಸ ಕೂಡ ಮಾಡುವವರಾದರೆ ಮುಗಿಯಿತು. ಸಮಯ ಉಳಿತಾಯ ಮಾಡಿ ಗಡಿಬಿಡಿಯಲ್ಲಿ ಎಲ್ಲ ಟಾಸ್ಕ್ ಮುಗಿಸಬೇಕಾಗುತ್ತದೆ. ಆಫೀಸ್ ಕೆಲಸದ ಜೊತೆಗೆ ಮನೆ ಕೆಲಸ ಮುಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ, ಮಹಿಳೆಯರ ಅಡುಗೆ ಮನೆ ಕೆಲಸ ಸುಲಭವಾಗಲು ಕೆಲವೊಂದು ಟಿಪ್ಸ್ ನೀಡಲಾಗಿದೆ.
ಬೆಳಗ್ಗೆ ನೀವು ತರಕಾರಿ ಬಳಸಿ ಏನಾದರೂ ಅಡುಗೆ ಮಾಡಬೇಕೆಂದು ಅಂದು, ಹಿಂದಿನ ದಿನವೇ ತರಕಾರಿಗಳನ್ನು ಹೆಚ್ಚಿ, ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ಮಾರನೇ ದಿನ ನೀವು ಅದನ್ನು ಫ್ರೆಶ್ ಆಗಿ ಬಳಸಬಹುದು. ಚಪಾತಿ ಮಾಡುವ ಸಂದರ್ಭ ಪ್ರತಿ ಬಾರಿಯೂ ನೀವು ಹಿಟ್ಟು ಕಲಸಬೇಕಾಗುತ್ತದೆ. ಹಾಗಿದ್ರೆ, ಏನೂ ಮಾಡೋದು ಅಂತೀರಾ?? ಒಮ್ಮೆಲೆ ಹೆಚ್ಚಾಗಿ ಚಪಾತಿ ಹಿಟ್ಟನ್ನು ರೆಡಿ ಮಾಡಿಕೊಂಡು ನಿಮಗೆ ಬೇಕಾದಷ್ಟು ಮಾತ್ರ ಉಪಯೋಗಿಸಿ, ಉಳಿದದ್ದನ್ನು ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ನೀವು ಸುಮಾರು 15 ದಿನಗಳವರೆಗೂ ಸ್ಟೋರ್ ಮಾಡಿಡಬಹುದು. ಹೋಳು ಮಾಡಿದ ತೆಂಗಿನ ಕಾಯಿ ಹೆಚ್ಚು ಕಾಲ ಬಾಳಿಕೆ ಬರಬೇಕೆಂದರೆ, ಸ್ಟೌವ್ ಹಚ್ಚಿ ತೆಂಗಿನ ಹೋಳಿನ ಒಳಭಾಗ ಕಪ್ಪಾಗುವವರೆಗೂ ಬಿಸಿ ಮಾಡಿಟ್ಟುಕೊಳ್ಳಿ. ಹೀಗೆ ಮಾಡಿದರೆ, ನೀವು ರೆಫ್ರಿಜರೇಟರ್ನಲ್ಲಿಡದಿದ್ದರೂ ತೆಂಗಿನಕಾಯಿ ಹೆಚ್ಚು ದಿನ ಬಾಳಿಕೆ ಬರುತ್ತದೆ. ಒಂದೇ ಸಲಕ್ಕೆ ಹೆಚ್ಚು ಈರುಳ್ಳಿಗಳನ್ನು ಹೆಚ್ಚಿ ಫ್ರೈ ಮಾಡಿಕೊಂಡು ಅದನ್ನು ರೆಫ್ರಿಜರೇಟರ್ನಲ್ಲಿ ಸ್ಟೋರ್ ಮಾಡಿಡಬಹುದು. ಇದರಿಂದ ನಿಮ್ಮ ಸಮಯ ಉಳಿತಾಯದ ಜೊತೆಗೆ ಅಡುಗೆ ರುಚಿ ಕೂಡ ಹೆಚ್ಚುತ್ತದೆ. ನೀವು ಮಾಡುವ ಖಾರ ಅಡುಗೆಗೆ ಈ ಫ್ರೈಡ್ ಆನಿಯನ್ ಬಳಕೆ ಮಾಡಬಹುದು. ಅಡುಗೆ ಮಾಡಲು ನೀವು ರಾತ್ರಿ ಚನಾದಾಲ್/ಕಡ್ಲೆಕಾಳು ನೆನೆಸಿಡಲು ಮರೆತರೆ, ಅದನ್ನು ಕುದಿಯುವ ನೀರಿನಲ್ಲಿ 1 ಗಂಟೆ ಸಮಯ ಕುದಿಸಿ ನಂತರ ಕುಕ್ಕರ್ಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸುವ ಮೂಲಕ ಕುಕ್ ಮಾಡಿದರೆ ಸಾಕು. ಯಾವುದೇ ಅಡಿಗೆಯಾದರು ತೆಂಗಿನಕಾಯಿ ಬಳಸಬೇಕಾಗುತ್ತದೆ. ಹಾಗೆಂದು ತೆಂಗಿನಕಾಯಿ ತುರಿಯುತ್ತಾ ಕೂರಲು ಸಮಯವಿಲ್ಲ ಎನ್ನುವವರು ಹೀಗೆ ಮಾಡಿ, ನೀವು ಫ್ರೀ ಇರುವಾಗ ತೆಂಗಿನಕಾಯಿ ಚೂರುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಅದನ್ನು ಫುಡ್ ಪ್ರೊಸೆಸರ್ ಇಲ್ಲವೇ ಮಿಕ್ಸರ್ ಗ್ರೈಂಡರ್ನಲ್ಲಿ ನೀರು ಹಾಕದೆ ಗ್ರೈಂಡ್ ಮಾಡಿಟ್ಟುಕೊಳ್ಳಿ. ಇದನ್ನು ಏರ್ ಟೈಟ್ ಜಾರ್ನಲ್ಲಿ ಸೇರಿಸಿ ಫ್ರೀಜರ್ನಲ್ಲಿರಿಸಿ. ನಿಮಗೆ ಅವಶ್ಯಕತೆಯಿದ್ದ ಸಂದರ್ಭದಲ್ಲಿ ತೆಂಗಿನಕಾಯಿ ಬಳಸಿಕೊಳ್ಳಬಹುದು.