ಚೆನ್ನೈ : ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕಾರುಗಳ ಉಡುಗೊರೆ ನೀಡುವ ಮೂಲಕ ಗಮನಸೆಳೆದಿದೆ. ಐಟಿ ಸಂಸ್ಥೆಯ ಮುಖ್ಯಸ್ಥರೊಬ್ಬರು ತಮ್ಮ ಕಂಪನಿಯ 50 ಉದ್ಯೋಗಿಗಳಿಗೆ ‘ಕೃತಜ್ಞತೆ’ ವ್ಯಕ್ತಪಡಿಸಲು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಐಡಿಯಾಸ್2ಐಟಿ ಟೆಕ್ನಾಲಜಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ ಮುರಳಿ ಅವರು ತಮ್ಮ ಪತ್ನಿಯೊಂದಿಗೆ 2009 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದಿಂದಲೂ ಕೆಲವು ಉದ್ಯೋಗಿಗಳು ತಮ್ಮ ಸಂಸ್ಥೆಯ ಏರಿಳಿತದ ಸಮಯದಲ್ಲಿ ತಮ್ಮೊಂದಿಗೆ ನಿಂತಿದ್ದಾರೆ. ಅವರ ಬೆಂಬಲವನ್ನು ಗುರುತಿಸಿ ‘ಕೃತಜ್ಞತೆ’ ವ್ಯಕ್ತಪಡಿಸಲು ತಾವು ಕಾರು ನೀಡುತ್ತಿದ್ದೇನೆ ಎಂದು ಮುರಳಿ ಹೇಳಿದ್ದಾರೆ. “ನಮ್ಮ ಸಂಸ್ಥೆಯಲ್ಲಿ ನನ್ನ ಸಂಗಾತಿ ಮತ್ತು ನಾನು ಎಲ್ಲಾ ಷೇರುಗಳನ್ನು ಹೊಂದಿದ್ದೇವೆ. ನಾವು ಈಗ ಷೇರುಗಳನ್ನು ಪರಿವರ್ತಿಸಲು ನಿರ್ಧರಿಸಿದ್ದೇವೆ, ಶೇಕಡಾ 33 ರಷ್ಟು ಷೇರುಗಳನ್ನು ದೀರ್ಘಾವಧಿಯ ಉದ್ಯೋಗಿಗಳಿಗೆ ನೀಡಲಿದ್ದೇವೆ. ನಾವು ಸಂಪತ್ತು ಹಂಚಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ, ಇದಕ್ಕಾಗಿಯೇ ನಮ್ಮ ಉದ್ಯೋಗಿಗಳಿಗೆ 50 ಕಾರುಗಳನ್ನು ನೀಡಲು ನಿರ್ಧರಿಸಿದ್ದೇವೆ” ಎಂದು ಮುರಳಿ ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಈ ಕಂಪನಿಯು ಉದ್ಯೋಗಿಗಳ ಕಠಿಣ ಪರಿಶ್ರಮವನ್ನು ಗುರುತಿಸಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.