ಚಿನ್ನ ಮತ್ತು ಬೆಳ್ಳಿ ಫೈಂಡಿಂಗ್ಗಳು ಹಾಗೂ ಅಮೂಲ್ಯ ಲೋಹ ನಾಣ್ಯಗಳ ಮೇಲೆ ಆಮದು ಸಂಕವನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಮೂಲಭೂತ ಕಸ್ಟಮ್ಸ್ ಡ್ಯೂಟಿ ಶೇ. 10 ಹಾಗೂ ಎಐಡಿಸಿ ಶೇ. 5ರಷ್ಟು ಒಳಗೊಂಡಿದೆ. ಈ ಮುಂಚೆ ವಿಧಿಸಲಾಗುತ್ತಿದ್ದ ಸೋಷಿಯಲ್ ವೆಲ್ಫೇರ್ ಸರ್ಚಾರ್ಜನ್ನು ಕೈಬಿಡಲಾಗಿದೆಯಾಗಿದೆ. ಅಮೂಲ್ಯ ಲೋಹಗಳನ್ನು ಒಳಗೊಂಡಿರುವ ಸ್ಪೆಂಟ್ ಕೆಟಲಿಸ್ಟ್ಗಳ ಮೇಲೆ ಆಮದು ಸುಂಕವನ್ನು ಶೇ. 14.35ಕ್ಕೆ ಏರಿಸಲಾಗಿದೆ. ಇದರಲ್ಲಿ ಬೇಸಿಕ್ ಕಸ್ಟಮ್ಸ್ ಡ್ಯೂಟಿ ಶೇ. 10ರಷ್ಟು ಇದೆ. ಉಳಿದದ್ದು ಎಐಡಿಸಿ ತೆರಿಗೆಯಾಗಿದೆ.
ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಿಕೆಯ ವೇಳೆ ಜೋಡಿಸಲು ಬಳಸುವ ಸ್ಕ್ರೂ, ಪಿನ್, ಹುಕ್ ಇತ್ಯಾದಿ ಪುಟ್ಟ ಬಿಡಿಭಾಗಗಳನ್ನು ಫೈಂಡಿಂಗ್ಸ್ ಎಂದು ಕರೆಯಲಾಗುತ್ತದೆ. ಎಂಟು ಲೋಹಗಳನ್ನು ಸದ್ಯಕ್ಕೆ ಅಮೂಲ್ಯವೆಂದು ಪರಿಗಣಿಸಲಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ಪಲಾಡಿಯಂ, ರೋಡಿಯಂ, ರುದೇನಿಯಂ, ಇರಿಡಿಯಂ ಮತ್ತು ಆಸ್ಮಿಯಮ್, ಇವುಗಳು ಎಂಟು ಪ್ರೀಷಿಯಸ್ ಮೆಟಲ್ ಎನಿಸಿವೆ. ಕೆಟಲಿಸ್ಟ್ ಎಂಬುದು ಕೈಗಾರಿಕೆಗಳಲ್ಲಿ ಉತ್ಪನ್ನ ತಯಾರಿಸಲು ಬಳಸಲಾಗುವ ವಸ್ತು. ಒಂದು ಸಹಜ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಮಾಡಲು ಪುಷ್ಟಿ ಕೊಡುತ್ತದೆ. ಈ ರೀತಿ ಬಳಕೆಯಾಗಿ ಕೊನೆಗೆ ನಿರುಪಯುಕ್ತ ಎನಿಸುವ ವಸ್ತುವನ್ನು ಸ್ಪೆಂಟ್ ಕೆಟಲಿಸ್ಟ್ ಎನ್ನುತ್ತಾರೆ. ಇದರಲ್ಲಿ ಅಮೂಲ್ಯ ಲೋಹಗಳಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸ್ಪೆಂಟ್ ಕೆಟಲಿಸ್ಟ್ಗಳನ್ನು ರೀಸೈಕಲ್ ಮಾಡಿ, ಅದರಿಂದ ಅಮೂಲ್ಯ ಲೋಹವನ್ನು ಹೊರತೆಗೆಯಲಾಗುತ್ತದೆ. ಗೋಲ್ಡ್ ಫೈಂಡಿಂಗ್ಸ್, ಸಿಲ್ವರ್ ಫೈಂಡಿಂಗ್ಸ್, ಸ್ಪೆಂಟ್ ಕೆಟಲಿಸ್ಟ್ ಇವೆಲ್ಲವೂ ಭಾರತದಲ್ಲೂ ಲಭ್ಯ ಇವೆ. ಇಲ್ಲಿಯ ಸ್ಥಳೀಯ ಉದ್ಯಮವನ್ನು ರಕ್ಷಿಸಲು ಸರ್ಕಾರ ಆಮದು ಸುಂಕವನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಜೊತೆಗೆ ಸರ್ಕಾರಕ್ಕೂ ಹೆಚ್ಚು ಆದಾಯ ಬರುತ್ತದೆಯಾಗಿದೆ.