ಭುವನೇಶ್ವರ್ : ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್ ಶಾಪ್ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಬಹುತೇಕ ವೈದ್ಯರ ಬರಹ ಅಸ್ಪಷ್ಟವಾಗಿರುತ್ತದೆ. ಹೀಗಾಗಿ ಏನು ಬರೆದಿದ್ದಾರೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಔಷಧ ಚೀಟಿ ನೋಡಿ ವೈದ್ಯರನ್ನು ಶಪಿಸಿದವರಲ್ಲಿ ನೀವು ಕೂಡ ಒಬ್ಬರಾಗಿರಬಹುದು. ವೈದ್ಯರಿಗೆ ಹೇಳುವವರು ಯಾರೂ ಇಲ್ಲವಾ ಅನಿಸಿರಬಹುದು. ಆದರೆ, ಈ ವಿಚಾರದಲ್ಲಿ ಒಡಿಶಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಎಲ್ಲ ವೈದ್ಯರು ವೈದ್ಯಕೀಯ ಚೀಟಿ, ಮರಣೋತ್ತರ ವರದಿ ಮತ್ತು ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸ್ಪಷ್ಟವಾದ ಕೈಬರಹ ಅಥವಾ ಕ್ಯಾಪಿಟಲ್ ಲೆಟರ್ಗಳಲ್ಲಿ ಬರೆಯುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿಕೊಳ್ಳಬೇಕೆಂದು ಒಡಿಶಾ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಪಾಣಿಗ್ರಹಿ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸುಲಭವಾಗುವಂತೆ ಸ್ಪಷ್ಟ ಕೈಬರಹ ಇರಲಿ ಎಂದು ಎಲ್ಲ ವೈದ್ಯಕೀಯ ಕೇಂದ್ರ, ಖಾಸಗಿ ಕ್ಲೀನಿಕ್ಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೂ ಕೂಡ ನ್ಯಾಯಾಲಯ ಸೂಚಿಸಿದೆ. ಒಡಿಶಾದ ದೆಂಕನಾಲ್ ಜಿಲ್ಲೆಯ ರಾಸನಂದಾ ಭೋಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಹಾವು ಕಡಿತದಿಂದ ರಾಸನಂದಾ ಅವರ ಹಿರಿಯ ಮಗ ಸೌವಾಗ್ಯ ರಂಜನ್ ಭೋಯಿ ಮೃತಪಟ್ಟಿದ್ದಾರೆ. ಸರ್ಕಾರದಿಂದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ್ದ ಮರಣೋತ್ತರ ವರದಿಯಲ್ಲಿನ ವೈದ್ಯರ ಬರಹ ಸ್ಪಷ್ಟವಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಔಷಧಿಗಳ ಹೆಸರುಗಳಲ್ಲಿ ಸ್ಪಷ್ಟತೆ ಇರುವಂತೆ ಪ್ರಿಸ್ಕ್ರಿಪ್ಷನ್ ಬರೆಯುವಾಗ ಸ್ಪಷ್ಟವಾದ ಕೈಬರಹವನ್ನು ಅನುಸರಿಸಬೇಕು ಎಂದು ನ್ಯಾಯಾಲಯದ ನಿರ್ದೇಶನವು ಒತ್ತಿಹೇಳುತ್ತದೆ. ಅನೇಕ ಸಂದರ್ಭಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಬರೆಯುವಾಗ ಹೆಚ್ಚಿನ ವೈದ್ಯರ ಸಾಮಾನ್ಯ ವಿಧಾನವು ದಾಖಲೆಗಳ ಪರಿಶೀಲನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಆ ಪತ್ರಗಳನ್ನು ಓದಲು ಮತ್ತು ಖಚಿತವಾದ ತೀರ್ಮಾನಕ್ಕೆ ಬರಲು ತುಂಬಾ ಕಷ್ಟಕರವಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಜಿಗ್ಜ್ಯಾಗ್ ಕೈಬರಹವನ್ನು ಅನುಸರಿಸುವುದು ವೈದ್ಯರಲ್ಲಿ ರೂಢಿಯಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಮತ್ತು ನ್ಯಾಯಾಂಗವು ವೈದ್ಯಕೀಯ ದಾಖಲೆಗಳನ್ನು ಓದಲು ಕಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆಯಾಗಿದೆ.