ಉಡುಪಿ : ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಸಹಕಾರ ತೋರಿಸುತ್ತಿದ್ದು ಕೇಂದ್ರದ ಯೋಜನೆಗಳನ್ನು ಅನುಷ್ಠಾನ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಸಿಎಸ್ ಹೋಗಬಾರದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ವಿಕಸಿತ ಭಾರತದ ಯೋಜನೆ ಅನುಷ್ಠಾನವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದೇನೆ. ಆದ್ರೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಕೇಂದ್ರ ಸರ್ಕಾರದ ಕಾರ್ಯ ಯೋಜನೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದ ಅವರು ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ನಂಬಿಕೂತರೆ ಆಗುವುದಿಲ್ಲ, ಕೇಂದ್ರ ಕಾಲಕಾಲಕ್ಕೆ ಅನುದಾನ ಕೊಡುತ್ತದೆ. ರಾಜ್ಯ ಸರ್ಕಾರ ಮೊದಲು ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಸಿದ್ದರಾಮಯ್ಯನವರೇ 33,000 ಕೋಟಿ ರೂಪಾಯಿ ನಷ್ಟವಾಗಿದ್ದು 42 ಲಕ್ಷ ರೈತರಿಗೆ ಬರದ ಬಿಸಿ ತಟ್ಟಿದೆ. ಮುಖ್ಯಮಂತ್ರಿಗಳೇ ಮೊದಲು 10 ಸಾವಿರ ಕೋಟಿ ಬಿಡುಗಡೆ ಮಾಡಿ, ಬೀಜಕ್ಕೆ ಗೊಬ್ಬರಕ್ಕೆ ಅನುದಾನ ಮಾಡಿಕೊಡಿ ಆ ಬಳಿಕ ಒಟ್ಟಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸೋಣ ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರಕ್ಕೆ ಒತ್ತಡ ತರುವುದು ಸಂಸದರ ಕೆಲಸ ಅಲ್ಲ. ಕೇಂದ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನ ಮಾಡುವುದು ಮಾತ್ರ ಸಂಸದರ ಕೆಲಸ. ಆದ್ರೆ ರಾಜ್ಯ ಸರ್ಕಾರ ನಮ್ಮ ಸಂಸದರ ಮೇಲೆ ಅಪಪ್ರಚಾರ ಮಾಡುತ್ತಿದೆ. ರಾಜ್ಯ ಸರ್ಕಾರದ ನಡವಳಿಕೆ ಸರಿ ಇಲ್ಲ 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗುತ್ತೆ 50,000 ಕೋಟಿ ಮಾತ್ರ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದು, ಮುಖ್ಯಮಂತ್ರಿಗಳೇ ರಾಜ್ಯದ ಜನತೆಗೆ ತಪ್ಪು ಮಾಹಿತಿ ಕೊಡಬಾರದು ಎಂದ ಕೋಟ ಸರಕಾರ ಹೇಳುವುದು ಒಂದು ಮಾಡುವುದು ಇನ್ನೊಂದು, ಸಿದ್ದರಾಮಯ್ಯ ಸರ್ಕಾರ ಬರ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಕೋಟಾ ಹರಿಹಾಯ್ದರಾಗಿದೆ.