ಬೆಂಗಳೂರು : ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ಬಗ್ಗೆ ಬಿಡದಿಯಲ್ಲಿ ಜೆಡಿಎಸ್ ನಾಯಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಡವರನ್ನು ಲೂಟಿ ಮಾಡಿಕೊಂಡು ಗುಡ್ಡೆ ಹಾಕಿದ್ದಾರೆ. ಅಂಥವರನ್ನು ದೇಶ ಕಟ್ಟು ಅಂತ ಕಳುಹಿಸಿದರೆ ಅವರು ದೇಶ ಕಟ್ಟುತ್ತಾರಾ? ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರೆ ಅಷ್ಟೇ. ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕಲ್ಲು ಒಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ದೇಶದ ಮೊದಲನೇ ಬಜೆಟ್ 174 ಕೋಟಿ ಇತ್ತು. ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಹಣಕಾಸು ಆಯೋಗಗಳನ್ನು ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿಕೊಟ್ಟು ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣಬೇಕು ಎಂಬ ವರದಿ ಕೊಡುತ್ತಾರೆ ಎಂದರು.
ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ, ಯಾವ ರಾಜ್ಯ ಅಭಿವೃದ್ಧಿ ಆಗಿದೆ ಎಂಬುದನ್ನು ನೋಡಿಕೊಂಡು ಹಣ ಹಂಚುತ್ತಾರೆ. ಈ ಹಂಚಿಕೆ ವ್ಯವಸ್ಥೆಯನ್ನು ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿತ್ತೇ ವಿನಹ ಪ್ರಧಾನಿ ಮೋದಿ ಬಂದು ಶುರು ಮಾಡಿದ್ದಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಪಡೆಯಲು ಸಾಧ್ಯವಿಲ್ಲ. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಬೇಕು. ಕೇಂದ್ರ ಸರ್ಕಾರದ ಮನವೊಲಿಸಿ ಹಣ ಪಡೆಯಬೇಕು. ಅದನ್ನು ಬಿಟ್ಟು ಇವರ ಬಾಲಿಷ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.