ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ವಿವಿಧೆಡೆ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಮಳೆ ಸುರಿಯುತ್ತಿದ್ದು, ಸೆಕೆಯಿಂದ ಬಳಲುತ್ತಿದ್ದ ಜನರಿಗೆ ಈ ದಿಢೀರ್ ಮಳೆ ತಂಪೆರೆದಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಈ ಮಳೆ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಹಲವೆಡೆ ನಿನ್ನೆ ರಾತ್ರಿಯಿಂದಲೇ ಗುಡುಗು ಮಿಂಚು ಸಹಿತ ಎಡೆಬಿಡದೆ ಸುರಿದಿದೆ. ಬಂಟ್ವಾಳ ತಾಲೂಕಿನ ಸಜಿಪ, ಇರಾ, ಮಂಚಿ, ಮುಡಿಪು ಭಾಗದಲ್ಲಿ ಭಾರೀ ಮಳೆಯಾಗಿದೆ. ಉಳ್ಳಾಲ ತಾಲೂಕಿನ ಕೊಣಾಜೆ, ಬೀರಿ, ತಲಪಾಡಿ, ಕೋಟೆಕಾರ್, ತೊಕ್ಕೊಟ್ಟು ಪ್ರದೇಶಗಳಲ್ಲಿ ಇಂದು ಉತ್ತಮ ಮಳೆ ಬಂದಿದೆ.
ಮಂಗಳೂರು ನಗರದಲ್ಲಿಯೂ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇವತ್ತು ಕೂಡಾ ಅದೇ ಪರಿಸ್ಥಿತಿ ಇದೆ. ಮೋಡ ಕವಿದ ವಾತಾವರಣದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಿಮಾನಗಳು ಇಳಿಯಲು ಕಷ್ಟ ಸಾಧ್ಯವಾಗಿತ್ತು. ಹವಾಮಾನ ಇಲಾಖೆಯು ಮುಂದಿನ 3-4 ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ದಕ್ಷಿಣ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಸಮುದ್ರದಲ್ಲಿ ಗಂಟೆಗೆ 40 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆಯಾಗಿದೆ.