ಬೆಂಗಳೂರು: ಅಯೋಧ್ಯೆಯಲ್ಲಿ ಇಂದು ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ ಅದರಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಅಯೋಧ್ಯ ಕಾರಣವಾಗಲಿದ್ದು ಇದರ ಪ್ರಯುಕ್ತ ಕರ್ನಾಟಕ ರಾಜ್ಯದಲ್ಲೂ ಕೂಡ ರಜೆ ಘೋಷಿಸಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಮ ವಿರೋಧಿ, ಹಿಂದೂ ವಿರೋಧಿ ನೀತಿ ತಾಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಜೆ ಘೋಷಿಸುವಂತೆ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹ ರಜೆ ನೀಡುವಂತೆ ಕೇಳಿದ್ದರು, ಆದರೆ ಸಿದ್ದರಾಮಯ್ಯ ರಜೆ ನೀಡುವುದಿಲ್ಲ ಎಂದಿದ್ದಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ..
ಧಾರವಾಡದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ಸಿಗರಿಗೆ ಶ್ರೀರಾಮನ ಶಾಪ ತಟ್ಟದೇ ಇರದು ಎಂದು ಕಿಡಿ ಕಾರಿದ್ದಾರೆ. ಕೊಪ್ಪಳದ ಆಂಜನಾದ್ರಿಯಲ್ಲಿಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶವೇ ರಾಮನತ್ತ ಚಿತ್ತ ಹರಿಸುತ್ತಿದೆ. ರಾಜ್ಯದಲ್ಲಿರುವುದು ಶ್ರೀರಾಮ ವಿರೋಧಿ ಸರ್ಕಾರ ಎಂದು ಜರಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಿದ್ದರಾಮಯ್ಯ ತಾವೂ ರಾಮಭಕ್ತ ಎಂದು ಹೇಳು ತ್ತಾರೆ. ಆದರೆ, ಅವರು ರಹೀಂ ಭಕ್ತ ಎಂದು ವಾಗ್ದಾಳಿ ನಡೆಸಿದರು.ಇದೇ ವೇಳೆ, ವೇದವ್ಯಾಸ್ ಕಾಮತ್, ನಳಿನ್ ಕುಮಾರ್ ಕಟೀಲ್ ಸೇರಿ ಹಲವು ಶಾಸಕರು, ಸಂಸದರು, ವಿಶ್ವ ಹಿಂದೂ ಪರಿಷತ್, ಭಜರಂಗದಳದ ನಾಯಕರು ಕೂಡ ಸರ್ಕಾರವನ್ನು ಟೀಕಿಸಿದ್ದಾರೆ.