ಜಾರ್ಖಂಡ್ : ಜನವರಿ 22ರಂದು ರಾಮಮಂದಿರ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾಗುತ್ತಿರುವುದಕ್ಕೆ ಸುದೀರ್ಘ ಮೂರು ದಶಕಗಳ ಕಾಲ ಮೌನ ವೃತದ ಶಪಥ ಕೈಗೊಂಡಿದ್ದ ಜಾರ್ಖಂಡ್ ನ 85 ವರ್ಷದ ಮಹಿಳೆಯೊಬ್ಬರು ತನ್ನ ಮೌನ ವೃತ ಮುರಿಯಲು ಸಿದ್ಧರಾಗಿದ್ದಾರೆ ಎಂದು ವರದಿ ತಿಳಿಸಿದೆ.
1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಸರಸ್ವತಿ ದೇವಿ ಮೌನ ವೃತದ ಶಪಥ ಕೈಗೊಂಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರವೇ ತನ್ನ ಮೌನ ವೃತ ಮುರಿಯುವುದಾಗಿ ಆಕೆ ತಿಳಿಸಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ಇದೀಗ ಭವ್ಯ ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಧನ್ ಬಾದ್ ನಿವಾಸಿ ಸರಸ್ವತಿ ದೇವಿ ಅವರು ಸೋಮವಾರ ರಾತ್ರಿ ಉತ್ತರಪ್ರದೇಶಕ್ಕೆ ರೈಲಿನಲ್ಲಿ ತೆರಳಿದ್ದಾರೆ. “ಮೌನಿ ಮಾತಾ” ಎಂದೇ ಜನಪ್ರಿಯರಾಗಿದ್ದ ಈಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಸಾಂಕೇತಿಕ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದರಂತೆ, ಆದರೆ ಕೆಲವೊಂದು ಕ್ಲಿಷ್ಟಕರ ಮಾತನ್ನು ಬರೆದು ತೋರಿಸುತ್ತಿದ್ದರು. ಸರಸ್ವತಿ ದೇವಿ ಅವರು ಸ್ವಲ್ಪ ಸಮಯ ಮೌನ ವೃತವನ್ನು ಮುರಿದು ಒಂದು ಗಂಟೆ ಮಾತ್ರ ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ನೆರವೇರಿಸಿದ ನಂತರ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಿಂದ ತನ್ನ ತಾಯಿ ಮೌನ ವೃತಕ್ಕೆ ಶರಣಾಗಿದ್ದರು ಎಂದು ಸರಸ್ವತಿ ದೇವಿಯ ಕಿರಿಯ ಪುತ್ರ ಹರೇ ರಾಮ್ ಅಗರ್ವಾಲ್ (55ವರ್ಷ) ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಸೋಮವಾರ ರಾತ್ರಿ ರೈಲಿನಲ್ಲಿ ಅಯೋಧ್ಯೆಗೆ ತೆರಳಿರುವ ನನ್ನ ತಾಯಿ ಜನವರಿ 22ರಂದು ಮೌನ ವೃತ ಮುರಿಯಲಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಗಮಿಸುವಂತೆ ತಾಯಿಗೆ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರು ಆಹ್ವಾನ ನೀಡಿರುವುದಾಗಿ ಹರೇ ರಾಮ್ ಮಾಹಿತಿ ನೀಡಿದ್ದಾರೆ. ಎಂಟು ಮಕ್ಕಳ ತಾಯಿಯಾಗಿರುವ (4 ಹೆಣ್ಣುಮಕ್ಕಳು) ಸರಸ್ವತಿ ದೇವಿ ತನ್ನ ಪತಿ ದೇವಕಿನಂದನ್ ಅಗರ್ವಾಲ್ 1986ರಲ್ಲಿ ನಿಧನರಾದ ಬಳಿಕ ತನ್ನ ಜೀವನವನ್ನು ರಾಮ ಭಕ್ತಿಗೆ ಸಮರ್ಪಿಸಿಕೊಂಡಿದ್ದರು. ಸರಸ್ವತಿ ದೇವಿ ಅವರು ಪ್ರಸ್ತುತ ತನ್ನ ಎರಡನೇ ಹಿರಿಯ ಪುತ್ರ, ಬಿಸಿಸಿಎಲ್ ಉದ್ಯೋಗಿ ನಂದ ಲಾಲ್ ಅಗರ್ವಾಲ್ ಜತೆ ವಾಸಿಸುತ್ತಿದ್ದಾರೆ.