ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಯೂಟ್ಯೂಬರ್ ಒಬ್ಬರಿಗೆ ಮದ್ರಾಸ್ ಹೈಕೋರ್ಟ್ 50 ಲಕ್ಷ ರೂ. ದಂಡ ವಿಧಿಸಿದೆ. ಯೂಟ್ಯೂಬರ್ ಜಿಯೋ ಮೈಕಲ್ ಎಂಬಾತ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಕಾರ್ಯಕರ್ತೆಯೂ ಆಗಿರುವ ಲಿಂಗತ್ವ ಅಲ್ಪಸಂಖ್ಯಾತರಾದ ಅಪ್ಸರಾ ರೆಡ್ಡಿ ವಿರುದ್ಧ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠ ದಂಡ ವಿಧಿಸಿ ತೀರ್ಪು ನೀಡಿದೆ.
ಅಪ್ಸರಾ ರೆಡ್ಡಿ ಅವರು ಸೆಲೆಬ್ರಿಟಿ ಭಾಷಣಕಾರರು, ಪತ್ರಕರ್ತೆ ಹಾಗೂ ಎಐಎಡಿಎಂಕೆ ವಕ್ತಾರರು ಆಗಿದ್ದಾರೆ. ಯೂಟ್ಯೂಬರ್ ಜಿಯೋ ಮೈಕಲ್ ಪದೇಪದೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಕಳೆದ ವಾರದಲ್ಲಿ ಈ ತೀರ್ಪು ಪ್ರಕಟವಾಗಿದ್ದು, ಸ್ವತಃ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರು ಅಪ್ಸರಾ ವಿರುದ್ಧ ಯೂಟ್ಯೂಬ್‌ನಲ್ಲಿ ಪ್ರಕಟವಾಗಿರುವ ಹಲವು ವಿಡಿಯೋಗಳು ಹಾಗೂ ಪೋಸ್ಟ್‌ಗಳನ್ನು ವೀಕ್ಷಿಸಿ ಆಕ್ಷೇಪಾರ್ಹ ಸಂಗತಿಗಳಿರುವುದನ್ನು ಗಮನಿಸಿದರು. ಅಲ್ಲದೆ ಆರೋಪಿಯು ಸತ್ಯವನ್ನು ಪರಿಶೀಲನೆಗೊಳಪಡಿಸದೆ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವುದನ್ನು ಕಂಡುಕೊಂಡರು. “ಆಕ್ಷೇಪಾರ್ಹ ವಿಡಿಯೋಗಳು ಅರ್ಜಿದಾರರನ್ನು ದುರುದ್ದೇಶಪೂರ್ವಕ ಹಾಗೂ ಮಾನಹಾನಿಗೊಳಿಸುವುದನ್ನು ಬಿಟ್ಟರೆ ಬೇರೆ ಯಾವುದೇ ವಿಷಯವಿಲ್ಲ. ಪೋಸ್ಟ್ ಪ್ರಕಟ ಮಾಡುವ ಸಂದರ್ಭದಲ್ಲಿ ಆರೋಪಿ ಇತತರ ಖಾಸಗಿ ಜೀವನದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಪ್ರಕಟ ಮಾಡುವುದು ಒಂದು ಹಕ್ಕು ಆದರೂ, ಕೆಲವೊಂದು ವಿಷಯಗಳಲ್ಲಿ ನಿರ್ಬಂಧಗಳು ಒಳಗೊಂಡಿರುತ್ತವೆ. ಅಲ್ಲದೆ ಖಾಸಗಿ ವಿಚಾರದಲ್ಲಿ ತನ್ನ ಗಡಿಯನ್ನು ದಾಟಬಾರದು. ನಿರ್ದಿಷ್ಟವಾಗಿ ಯೂಟ್ಯೂಬ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ನಡವಳಿಕೆ, ವರ್ತನೆ ಹಾಗೂ ಖಾಸಗಿ ವಿಚಾರಗಳಂಥ ಇಂತಹ ವಿಷಯಗಳು ಕಾಣಿಸಿಕೊಂಡಾಗ ನಿರ್ದಿಷ್ಟ ಸಮುದಾಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಆದ ಕಾರಣ ಇದು ಮಾನಹಾನಿಯೆಂದು ಕೋರ್ಟ್ ಪರಿಗಣಿಸಿದ್ದು, ಮಾನನಷ್ಟವನ್ನು ತುಂಬಿಕೊಡುವ ಸಲುವಾಗಿ ಆರೋಪಿಗೆ ದಂಡ ವಿಧಿಸಿದೆ” ಎಂದು ನ್ಯಾಯಾಧೀಶರು ತಿಳಿಸಿದರು. ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಎದುರಿಸುತ್ತಿರುವ ತೊಂದರೆಗಳು ಮತ್ತು ಕಷ್ಟಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಇಂತಹ ಘಟನೆಗಳು ಮತ್ತೆ ಮರುಕಳುಸದಂತೆ ಸೂಚಿಸಿದರು. ಅಲ್ಲದೇ ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌರವಯುತವಾದ ಪೋಸ್ಟ್ ಮಾಡುವಂತೆ, ತನ್ನ ಬಳಕೆದಾರರಿಗೆ ನಿರ್ದೇಶನ ನೀಡುವಂತೆ ಹಾಗೂ ಮಾರ್ಗದರ್ಶನ ಮಾಡುವಂತೆ ಗೂಗಲ್ ಮತ್ತು ಯೂಟ್ಯೂಬ್‌ಗೆ ಸಹ ನಿರ್ದೇಶನ ನೀಡಿದೆ. ಅಪ್ಸರಾ ಅವರು 1.25 ಕೋಟಿ ರೂ. ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ವಾದವಿವಾದಗಳನ್ನು ಪರಿಗಣಿಸಿ 50 ಲಕ್ಷ ರೂ. ದಂಡ ವಿಧಿಸಿತು. ಅಲ್ಲದೆ ಪ್ರಕಟಿಸಲಾಗಿದ್ದ ಎಲ್ಲ ಪೋಸ್ಟ್‌ಗಳನ್ನು ಅಳಿಸಿಹಾಕುವಂತೆ ಆದೇಶಿಸಿದೆ.