ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ದಾವಣಗೆರೆ ನಗರದ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಸಮಯದಲ್ಲಿ ರಜೆ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವ್ಯಕ್ತಿಯೋರ್ವ ಅವಹೇಳನವಾಗಿ ಮಾತನಾಡಿ ಸಮುದಾಯಗಳ ನಡುವೆ ದ್ವೇಷದ ಭಾವನೆ ಉಂಟುಮಾಡುವ ವಾಯ್ಸ್ ಮೆಸೇಜ್ ವಾಟ್ಸಪ್ ಗ್ರೂಪ್ ನಲ್ಲಿ ಹಾಕಿದ್ದರು. ವಾಯ್ಸ್ ಮೆಸೇಜ್ ಮಾಡಿದವರ ಮೊಬೈಲ್ ನಂಬರ್ ಮಾಹಿತಿ ಸಂಗ್ರಹಿಸಿ, ವಾಟ್ಸಾಪ್ ಗ್ರೂಪ್ ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡಿದ್ದ ವ್ಯಕ್ತಿಯನ್ನು ಕೆಟಿಜೆ ನಗರ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆರೋಪಿತನ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಟುವಳ್ಳಿಯ ಯುವಕನೋರ್ವ ಪವಿತ್ರ ಮದೀನಾದ ಮಸೀದಿಯ ಚಿತ್ರವನ್ನು ಬಳಸಿ ವಿಡಿಯೋ ಮಾಡಿ ಅದನ್ನು ತನ್ನ ಹಾಗೂ ತನ್ನ ಗೆಳಯರ ಮೊಬೈಲ್ ಗಳ ಮುಖಾಂತರ ಹರಿದಾಡಿಸಿದ್ದನು. ಈ ವಿಡಿಯೋ ಮುಸ್ಲಿಂ ಸಮಾಜದ ಭಾವನೆಗಳಿಗೆ ಧಕ್ಕೆ ತರುವಂತೆ ಚಿತ್ರಿಕರಿಸಲಾಗಿದೆ. ಇದರಿಂದ ಸಾಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದ್ದು ಅಂಥ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಾದಾಪೀರ್ ಎಂಬುವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನಿಗೆ ಬಾಹಿರವಾಗಿದ್ದು, ಅಂಥ ಪೋಸ್ಟ್ ಗಳನ್ನು ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲಿ ಎಚ್ಚರ ಇರಲಿ ಎಂದು ಎಸ್.ಪಿ. ಉಮಾ ಪ್ರಶಾಂತ್ ಸೂಚನೆ ನೀಡಿದ್ದಾರೆಯಾಗಿದೆ.