ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್(ಎನ್‌ಟಿಪಿಸಿ) 1975ರಲ್ಲಿ ಸ್ಥಾಪನೆಗೊಂಡಿದ್ದು, ಕೇಂದ್ರ ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ವಲಯ ಉದ್ಯಮವಾಗಿದ್ದು, ವಿದ್ಯುತ್ ಉತ್ಪಾದನೆ ಹಾಗೂ ರಾಜ್ಯ ವಿದ್ಯುತ್ ಮಂಡಳಿಗಳಿಗೆ ವಿದ್ಯುತ್ ವಿಭಜಿಸಿ, ಸರಬರಾಜು ಮಾಡುವ ಗುರಿ ಹೊಂದಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದ್ದು, 71,594 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ದೇಶದ ಅತಿ ದೊಡ್ಡ ವಿದ್ಯುತ್ ಕಂಪನಿಯೆಂಬ ಹೆಗ್ಗಳಿಕೆಯೂ ಇದೆ. ಪ್ರಸ್ತುತ ವಿವಿಧ ಹುದ್ದೆಗಳ ಭರ್ತಿಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 61 ಹುದ್ದೆಗಳಿವೆ. ಜಿಡಿಎಂಒ – 20, ಮೆಡಿಕಲ್ ಸ್ಪೆಷಲಿಸ್ಟ್(ಜಿಎಂ)- 25, ಮೆಡಿಕಲ್ ಸ್ಪೆಷಲಿಸ್ಟ್(ಜಿಎಸ್) – 7, ಮೆಡಿಕಲ್ ಸ್ಪೆಷಲಿಸ್ಟ್(ಅನಸ್ತೇಶಿಯ) – 5, ಮೆಡಿಕಲ್ ಸ್ಪೆಷಲಿಸ್ಟ್(ರೇಡಿಯೋಲಾಜಿಸ್ಟ್) – 4. ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಸಂಬಂಧಿಸಿದಂತೆ ಎಂಬಿಬಿಎಸ್, ಜನರಲ್ ಮೆಡಿಸಿನ್‌ನಲ್ಲಿ ಎಂಡಿ/ ಡಿಎನ್‌ಬಿ, ಜನರಲ್ ಸರ್ಜರಿಯಲ್ಲಿ ಎಂಎಸ್/ಡಿಎನ್‌ಬಿ, ಅನಸ್ತೇಶಿಯ ಹಾಗೂ ರೇಡಿಯೋಲಾಜಿಯಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕಿರುವುದು ಕಡ್ಡಾಯವಾಗಿದೆ. ಎನ್‌ಟಿಪಿಸಿ ನಿಯಮಾನುಸಾರ ಅಭ್ಯರ್ಥಿಯ ಗರಿಷ್ಠ ವಯೋಮಿತಿ 37 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ. ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು/ಒಬಿಸಿ ವರ್ಗದವರಿಗೆ 300ರೂ. ಶುಲ್ಕ ವಿಧಿಸಲಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಅಭ್ಯರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಯ ವೇತನವಿರಲಿದ್ದು, 50,000ರೂ.ನಿಂದ 2,00,000ರೂ.ವರೆಗೂ ವೇತನ ಶ್ರೇಣಿ ನಿಗದಿಗೊಂಡಿದೆ. 24.01.2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. https://careers.ntpc.co.in/recruitment/ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ವಿವರವನ್ನು ntpc.co.in ಇಲ್ಲಿ ಪಡೆಯಬಹುದು.