ಸಿಯೋಲ್:ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ, ಉತ್ತರ ಕೊರಿಯಾ ಅತ್ಯಂತ ವಿನಾಶಕಾರಿ ‘ಕ್ಲಸ್ಟರ್-ಬಾಂಬ್’ (Cluster-Bomb) ಸಿಡಿತಲೆಗಳನ್ನು ಹೊಂದಿರುವ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿಯು ಒಂದು ದೊಡ್ಡ ಪ್ರದೇಶವನ್ನು ಕ್ಷಣಾರ್ಧದಲ್ಲಿ ಬೂದಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾ ಘೋಷಿಸಿದೆ.
ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ‘ಕೆಸಿಎನ್ಎ’ (KCNA) ವರದಿಯ ಪ್ರಕಾರ, ‘ಹ್ವಾಸೋಂಗ್-11ಕಾ’ (Hwasong-11Ka) ಎಂಬ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದೆ. ಇದು ಸುಮಾರು 7 ಹೆಕ್ಟೇರ್ (17 ಎಕರೆ) ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
ಈ ಕ್ಷಿಪಣಿಯು ಆಕಾಶದಲ್ಲಿ ಹಾರುತ್ತಿರುವಾಗಲೇ ನೂರಾರು ಸಣ್ಣ ಬಾಂಬ್ಗಳಾಗಿ (Bomblets) ಸ್ಫೋಟಗೊಂಡು ವಿಶಾಲವಾದ ಪ್ರದೇಶದ ಮೇಲೆ ಮಳೆಯಂತೆ ಬೀಳುತ್ತದೆ. ಇದರಿಂದ ಏಕಕಾಲಕ್ಕೆ ಹಲವು ಗುರಿಗಳನ್ನು ನಾಶಪಡಿಸಬಹುದು.
ಏಪ್ರಿಲ್ 6 ರಿಂದ 8 ರವರೆಗೆ ನಡೆದ ಈ ಸರಣಿ ಪರೀಕ್ಷೆಗಳಲ್ಲಿ ಕ್ಲಸ್ಟರ್ ಬಾಂಬ್ ಮಾತ್ರವಲ್ಲದೆ, ಶತ್ರುಗಳ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಜಾಮರ್ ಮಾಡುವ ‘ಎಲೆಕ್ಟ್ರೋಮ್ಯಾಗ್ನೆಟಿಕ್ ಆಯುಧ’ (Electromagnetic Weapon) ಮತ್ತು ಕಾರ್ಬನ್ ಫೈಬರ್ ಬಾಂಬ್ಗಳನ್ನು ಸಹ ಪರೀಕ್ಷಿಸಲಾಗಿದೆ.
ದಕ್ಷಿಣ ಕೊರಿಯಾವನ್ನು ತನ್ನ “ಪರಮ ಶತ್ರು” ಎಂದು ಕರೆದಿರುವ ಉತ್ತರ ಕೊರಿಯಾ, ಈ ಹೊಸ ಆಯುಧಗಳು ನೆರೆ ರಾಷ್ಟ್ರದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ನೆರವಾಗಲಿವೆ ಎಂದು ಹೇಳಿಕೊಂಡಿದೆ.








