ಬೆಳಗಾವಿ ಸುವರ್ಣಸೌಧ: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ಯಡಿ ಇದುವರೆಗೆ 2,84,802 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ 757 ಕೋಟಿ 92 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 2024ರ ನವೆಂಬರ್ 28ರ ಅಂತ್ಯದವರೆಗೆ ಈ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಡಿ. 8ರ ಸೋಮವಾರ ಸರ್ಕಾರ ಮಾಹಿತಿ ನೀಡಿದೆ.
ವಿಧಾನಪರಿಷತ್ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರಿತನದ ಪ್ರಶ್ನೆಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉತ್ತರ ನೀಡಿದ್ದು, ಯೋಜನೆಯ ಪ್ರಗತಿ ವಿವರಗಳನ್ನು ವಿವರಿಸಿದ್ದಾರೆ. ಒಟ್ಟು 2.84 ಲಕ್ಷ ನೋಂದಾಯಿತ ನಿರುದ್ಯೋಗಿ ಫಲಾನುಭವಿಗಳಲ್ಲಿ ಉದ್ಯೋಗ ಪಡೆದವರ ಸಂಖ್ಯೆ ಬಹಳ ಕಡಿಮೆ ಇರುವುದು ಸರ್ಕಾರದ ಉತ್ತರದ ಮೂಲಕ ದೃಢಪಟ್ಟಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ಯುವನಿಧಿ ಯೋಜನೆ ಪ್ರಾರಂಭವಾದ ನಂತರ ಈವರೆಗೆ ಕೇವಲ 2,327 ಫಲಾನುಭವಿಗಳು ಉದ್ಯೋಗ ಅಥವಾ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದರೆ, ಯುವನಿಧಿ ಯೋಜನೆಗೆ ನೋಂದಣಿ ಮಾಡಿದ ಫಲಾನುಭವಿಗಳನ್ನು ಆದ್ಯತೆ ಆಧಾರದ ಮೇಲೆ 17,715 ಫಲಾನುಭವಿಗಳನ್ನು ಸಂಪರ್ಕಿಸಲಾಗಿತ್ತು. ಅವರಲ್ಲಿ 2,327 ಫಲಾನುಭವಿಗಳಿಗೆ ಉದ್ಯೋಗ ಲಭಿಸಿರುವುದು ಖಾತ್ರಿಯಾಗಿದೆ. ಹೀಗಾಗಿ ಈ ಫಲಾನುಭವಿಗಳು ಉದ್ಯೋಗ ಕಂಡುಕೊಂಡ ಕಾರಣ ಇವರಿಗೆ ಮಾಸಿಕ ಭತ್ಯೆಯನ್ನು ನಿಲ್ಲಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಫಲಾನುಭವಿಗಳಲ್ಲಿ ಬಳ್ಳಾರಿ ಜಿಲ್ಲೆಯ ಒಬ್ಬರು ಮರಣ ಹೊಂದಿದ್ದಾರೆ ಎಂದು ಸಹ ಸಚಿವರು ಇದೇ ವೇಳೆ ದೃಢಪಡಿಸಿದ್ದಾರೆ.
ಯುವ ಸಮೂಹಕ್ಕೆ ಬೆಳಕಾದ ಯುವನಿಧಿ: ದಿನೇಶ್ ಗೂಳಿಗೌಡ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಇಂದು ರಾಜ್ಯದ ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ಸಾಕಷ್ಟು ಅನುಕೂಲವಾಗಿದೆ. ಇದರಲ್ಲಿ ಭಾರತದ ಶಕ್ತಿಯಾಗಿರುವ ಯುವ ಸಮೂಹಕ್ಕಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಯ ಮಹತ್ವ ಎಲ್ಲರಿಗೂ ಅರಿವಾಗುತ್ತಿದೆ. ಇಂದು ಲಕ್ಷಾಂತರ ಮಂದಿ ಪದವಿ ಪೂರೈಸಿ ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಕೆಲವರಿಗೆ ಉದ್ಯೋಗ ಹುಡುಕಲು ಪಟ್ಟಣಗಳಿಗೆ ಬಂದು ನೆಲೆಗೊಳ್ಳಲೂ ಹಣಕಾಸಿನ ಸೌಲಭ್ಯ ಇರುವುದಿಲ್ಲ. ಅಲ್ಲದೆ, ಅವರ ಆರ್ಥಿಕ ಸ್ವಾವಲಂಬನೆಯೂ ಸಾಧ್ಯವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಯುವನಿಧಿ ಗ್ಯಾರಂಟಿ ಯೋಜನೆಯು ಲಕ್ಷಾಂತರ ಯುವಜನಕ್ಕೆ ಬೆಳಕಾಗಿದೆ ಎಂಬುದು ಈ ಅಂಕಿಅಂಶಗಳಿಂದ ದೃಢಪಟ್ಟಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಜನಪರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
2024ರ ಜನವರಿಯಲ್ಲಿ ಆರಂಭವಾಗಿದ್ದ ಯುವನಿಧಿ ಯೋಜನೆ
ಯುವನಿಧಿ ಯೋಜನೆ ಕರ್ನಾಟಕದ ನಿರುದ್ಯೋಗಿ ಪದವೀಧರರು (₹3,000/ತಿಂಗಳು) ಮತ್ತು ಡಿಪ್ಲೊಮಾ ಹೊಂದಿದವರಿಗೆ (₹1,500/ತಿಂಗಳು) ಎರಡು ವರ್ಷಗಳವರೆಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯು 2022-23ನೇ ಸಾಲಿನಲ್ಲಿ ಹಾಗೂ ಬಳಿಕ ಉತ್ತೀರ್ಣರಾದ ಹಾಗೂ ಬಳಿಕ 6 ತಿಂಗಳಿಂದ ಉದ್ಯೋಗವಿಲ್ಲದ ಯುವಕರಿಗೆ ಅನ್ವಯವಾಗುತ್ತದೆ. 2023ರ ಡಿಸೆಂಬರ್ 26ರಂದು ಅರ್ಜಿ ಸಲ್ಲಿಕೆ ಆರಂಭವಾಗಿ, ವಿವೇಕಾನಂದ ಜಯಂತಿ ದಿನವಾದ 2024ರ ಜನವರಿ 12ರಂದು ಶಿವಮೊಗ್ಗದಲ್ಲಿ ಚಾಲನೆಗೊಂಡಿತು. ಹಣವನ್ನು ಡಿಬಿಟಿ ಮೂಲಕ ನೇರವಾಗಿ ಪಾವತಿಸಲಾಗುತ್ತದೆ.
GOOD NEWS: ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೂ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ
ಮಕ್ಕಳಿಗೆ ಭಗವದ್ಗೀತೆ ಕಲಿಸಿ ಎನ್ನುವುದು ಮಹಾನ್ ಅಪರಾಧವೇ?: ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ALERT : ನಿಮ್ಮ `ಮನೆಯಲ್ಲಿ `ಇನ್ವರ್ಟರ್’ ಬಳಸುತ್ತೀರಾ? ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.!








