ಬೆಂಗಳೂರು: ರಾಜ್ಯದ ನಿರುದ್ಯೋಗಿ ಪದವೀಧರರು, ಡಿಪ್ಲೋಮಾದಾರರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವಂತ ಯುವನಿಧಿ ಯೋಜನೆಯನ್ನು ( Yuvanidhi Scheme ) ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಪದವೀಧರರಿಗೆ 3000, ಡಿಪ್ಲೋಮಾದಾರರಿಗೆ 1500 ನೀಡಲಾಗುತ್ತಿದೆ. ಇಂತಹ ಯುವನಿಧಿಗೆ ಫಲಾನುಭವಿಗಳು ಪ್ರತಿ ತಿಂಗಳ ಅಂತ್ಯಕ್ಕೆ ಸ್ವಯಂ ಘೋಷಣೆ ಪತ್ರ ಸಲ್ಲಿಕೆ ಕಡ್ಡಾಯವಾಗಿದೆ.
ಈ ಕುರಿತಂತೆ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಯುವನಿಧಿ ಸ್ವಯಂ ಘೋಷಣೆ ಕಡ್ಡಾಯವಾಗಿದೆ. ಪ್ರತಿ ತಿಂಗಳ ಅಂತ್ಯದೊಳಗೆ ಅಪ್ ಲೋಡ್ ಮಾಡಬೇಕು ಎಂದಿದ್ದಾರೆ. ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ನಾನು ನಿರುದ್ಯೋಗಿ, ವ್ಯಾಸಂಗ ಮುಂದುವರೆಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲ ಎಂದು ಘೋಷಣೆ ಮಾಡಬೇಕಾಗಿದೆ ಎನ್ನುವ ಷರತ್ತು ವಿಧಿಸಲಾಗಿದೆ. ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ.
ಇನ್ನು ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕಪತ್ರಗಳು, ಆಧಾರ್ ಕಾರ್ಡ್ ಹಾಗೂ ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಪರಿಶೀಲನೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಮುಂದಿನ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಅಭ್ಯರ್ಥಿಗಳಿಗೆ ಎಸ್ಎಂಎಸ್ ರವಾನಿಸಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ತಿಳಿಸಿದ್ದಾರೆ. ಸ್ವಯಂ ಘೋಷಣೆಗೆ sevasindhugs.karnataka.gov.in ವೆಬ್ ಸೈಟ್ ವೀಕ್ಷಿಸಲಬಹುದು. ಇಲ್ಲವೇ ಹೆಚ್ಚಿನ ಮಾಹಿತಿಗಾಗಿ 080-25189112ಗೆ ಕರೆ ಮಾಡಿ ಪಡೆಯಬಹುದಾಗಿದೆ ಎಂದಿದ್ದಾರೆ.