ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಚಾಲನೆಗೊಂಡಿದೆ.
ಪ್ರತೀ ತಿಂಗಳು 3,000 ಮತ್ತು 1500 ರೂ. ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆ ಆಗಿದೆ. ಜನವರಿ 12 ರಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಯುವನಿಧಿ ಯೋಜನೆಗೆ ಇದುವರೆಗೆ 1134 ಮಂದಿ ಹೆಸರು ನೋಂದಣಿ ಮಾಡಿದ್ದು, 562 ಮಂದಿಗೆ ಯುವನಿಧಿ ಯೋಜನೆ ತಲುಪುತಿದೆ. ಯುವನಿಧಿ ಯೋಜನೆ ಪಡೆಯುತ್ತಿರುವವರು ಪ್ರತಿ ತಿಂಗಳು ಸ್ವಯಂ ದೃಢೀಕರಣವನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಿದೆ ಎಂದು ಜಿಲ್ಲಾ ಉದ್ಯೋಗವಿನಿಯಮಾಯಾಧಿಕಾರಿ ರೇಖಾ ಗಣಪತಿ ಅವರು ತಿಳಿಸಿದ್ದಾರೆ.
ಕುಶಾಲನಗರ ತಾಲ್ಲೂಕಿನಲ್ಲಿ 177, ಮಡಿಕೇರಿ ತಾಲ್ಲೂಕಿನಲ್ಲಿ 304, ಪೊನ್ನಂಪೇಟೆ ತಾಲ್ಲೂಕಿನಲ್ಲಿ 133, ಸೋಮವಾರಪೇಟೆ ತಾಲ್ಲೂಕಿನಲ್ಲಿ 317, ವಿರಾಜಪೇಟೆ ತಾಲ್ಲೂಕಿನಲ್ಲಿ 203 ಮಂದಿ ಹೆಸರು ನೋಂದಾಯಿಸಿದ್ದಾರೆ. ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಯೋಜನೆಯಾದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗಿದೆ.
ಯುವನಿಧಿ ಯೋಜನೆಯಡಿ ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಾಯಿಸಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕಪತ್ರಗಳು, ಆಧಾರ್ ಕಾರ್ಡ್ ಹಾಗೂ ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ, (ರೂಂ ನಂ-22, ಎರಡನೇ ಮಹಡಿ, ಜಿಲ್ಲಾಡಳಿತ ಭವನ ಕಟ್ಟಡ ಕೊಡಗು ಜಿಲ್ಲೆ, ಮಡಿಕೇರಿ) ಇಲ್ಲಿಗೆ ಪರಿಶೀಲನೆಗೆ ಹಾಜರಾಗಬೇಕು.
ಹಾಗೆಯೇ ಯುವನಿಧಿ ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ಮಾಹೆಯ 25 ನೇ ತಾರೀಖಿನ ಒಳಗಾಗಿ ‘ಉನ್ನತ ವ್ಯಾಸಂಗ ಮುಂದುವರೆಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ಸ್ವಯಂ ಘೋಷಣೆ ನೀಡಬೇಕಾಗಿರುತ್ತದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರೇಖಾ ಗಣಪತಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1800 599 9918 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.