ಯುವನಿಧಿ ಯೋಜನೆಯಡಿಯಲ್ಲಿ ನೋಂದಣಿಯಾದ ಫಲಾನುಭವಿಗಳು ಕಡ್ಡಾಯವಾಗಿ ಯುವನಿಧಿ-ಪ್ಲಸ್ ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಪಡೆಯಲು ನೋಂದಾಯಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡು ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಯುವಕ, ಯುವತಿಯರಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಜಿಲ್ಲೆಯ ಜಿಟಿಟಿಸಿ, ಸಿಡಾಕ್, ಸರ್ಕಾರಿ ಐಟಿಐ ಹಾಗೂ ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ಮುಖಾಂತರ ನೀಡಲಾಗುತ್ತದೆ. ಆದ್ದರಿಂದ ಫಲಾನುಭವಿಗಳು ತರಬೇತಿಯನ್ನು ಪಡೆಯಲು ಪೋರ್ಟಲ್ https://www.kaushalkar.com/ ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಒಂದು ವೇಳೆ ತರಬೇತಿಯನ್ನು ಪಡೆಯಲು ನೋಂದಾಯಿಸದೆ ಇದ್ದಲ್ಲಿ ಅಂತಹ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ಸ್ಥಗಿತಗೊಳಿಸಲಾಗುವುದು.
ಪ್ರಸ್ತುತ ಯುವನಿಧಿ ಫಲಾನುಭವಿಗಳು ಯುವನಿಧಿ-ಪ್ಲಸ್ ಕಾರ್ಯಕ್ರಮದಡಿ ತರಬೇತಿಯನ್ನು ಪಡೆದರೂ ಸರ್ಕಾರವು ನಿಗದಿಪಡಿಸಿರುವ ಅವಧಿಯವರೆಗೆ ನಿರುದ್ಯೋಗ ಭತ್ಯೆಯನ್ನು ಪಡೆಯಲು ಯಾವುದೇ ತೊಂದರೆಗಳು ಇರುವುದಿಲ್ಲ. ಪೋರ್ಟಲ್ನಲ್ಲಿನ ನೋಂದಣಿ ಸಂಬಂಧದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಕೆ.ಜಿ.ಐ.ಡಿ ಕಚೇರಿ ಎದುರುಗಡೆ, ಜಿಲ್ಲಾಡಳಿತ ಭವನ ಕೊಪ್ಪಳ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.