ದೇಹದ ಪ್ರತಿಯೊಂದು ಜೀವಕೋಶಕ್ಕೂ ಪ್ರತಿಯೊಂದು ಅಂಗಕ್ಕೂ ಶಕ್ತಿ,ಪೋಷಕಾಂಶ, ಚೈತನ್ಯ ನೀಡುವುದು ಆಹಾರ.ಆಹಾರವು ವಿವಿಧ ಜೀವ ಕೋಶಗಳಿಗೆ ಪೋಷಕಾಂಶಗಳನ್ನು ನೀಡುವ ಮೊದಲು ಪೂರ್ವಭಾವಿಯಲ್ಲಿ ಜಾಠರಾಗ್ನಿಯ( Digestive fire) ಸಹಾಯದಿಂದ ಪಚನಗೊಂಡು,ಧಾತ್ವಗ್ನಿಯ ಸಹಕಾರದೊಂದಿಗೆ ಚಯಾಪಚಯನಗೊಳ್ಳುತ್ತದೆ(metabolism) ಮತ್ತು ಈ ಅಗ್ನಿಯು ಆಹಾರ ರಸವನ್ನು ಸಾರಭಾಗ ಅಂದರೆ ಪೋಷಣ ಭಾಗ ಮತ್ತು ಕಿಟ್ಟ ಭಾಗ (Waste) ವಾಗಿ ಬೇರ್ಪಡಿಸುತ್ತದೆ.ಸಾರಭಾಗವೂ ಜೀವಕೋಶಗಳಿಗೆ ಪೋಷಕಾಂಶ ನೀಡಿದರೇ, ಕಿಟ್ಟ ಭಾಗವು ಮಲಮೂತ್ರಾದಿಗಳ ಮುಖಾಂತರ ವಿಸರ್ಜನೆ ಆಗುತ್ತದೆ.
ಆಯುರ್ವೇದದ ಪ್ರಕಾರ “ರೋಗಃ ಸರ್ವೇ ಅಪಿ ಮಂದಾಗ್ನೋ” ಅಂದರೆ ದುರ್ಬಲವಾದ ಅಗ್ನಿಯೇ ಎಲ್ಲಾ ರೋಗಗಳ ಉದ್ಭವಕ್ಕೆ ಕಾರಣ ಎಂದರ್ಥ.
ಜಠರಾಗ್ನಿಯ ದುರ್ಬಲದಿಂದಾಗಿ ಸೇವಿಸಿದ ಆಹಾರ ಪರಿಪೂರ್ಣವಾಗಿ ಪಚನವಾಗದೆ ಅಪಕ್ವವಾದ ಆಹಾರ ರಸವು ಉತ್ಪತ್ತಿಯಾಗುತ್ತದೆ. ಈ ಅಪಕ್ವವಾದ ಆಹಾರ ರಸವನ್ನು “ಆಮ” ಎಂದು ಕರೆಯುತ್ತಾರೆ.ಈ ಆಮವು ತ್ರಿದೋಷಗಳಾದ ವಾತ,ಪಿತ್ತ, ಕಫ ದೋಷಗಳನ್ನು ಪ್ರಕೋಪಗೊಳಿಸಿ ರೋಗಗಳ ಉದ್ಭವಕ್ಕೆ ಕಾರಣವಾಗುತ್ತದೆ.
ಅಗ್ನಿಯ ದುರ್ಬಲಕ್ಕೆ ಕಾರಣಗಳು :
ಅತಿಯಾದ ತಣ್ಣನೆಯ ನೀರನ್ನು ಕುಡಿಯುವುದು.
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಕುಡಿಯುವುದು.
ಪದೇ ಪದೇ ಆಹಾರ ಅಥವಾ ಇನ್ನಿತರ ತಿನಿಸುಗಳನ್ನು ಸೇವಿಸುವುದು(Frequent eating).
ಮೊದಲು ಸೇವಿಸಿದ ಆಹಾರ ಜೀರ್ಣವಾಗದೆ, ಮುಂದಿನ ಆಹಾರವನ್ನು ಸೇವಿಸುವುದು.
ನೈಸರ್ಗಿಕ ವೇಗಗಳಾದ ಮಲ, ಮೂತ್ರ, ಹಸಿವು, ನಿದ್ರೆ ಮುಂತಾದವುಗಳನ್ನು ತಡೆಯುವುದು.
ಅತಿಯಾದ ರಾತ್ರಿ ಜಾಗರಣೆ ಮತ್ತು ಹಗಲು ನಿದ್ರೆ.
ಅತಿಯಾದ ಮಸಾಲೆ, ಖಾರ, ಕರಿದ ಪದಾರ್ಥಗಳ ಸೇವನೆ.
ಸಿಟ್ಟು, ಮಾನಸಿಕ ಖಿನ್ನತೆ, ಶೋಕ ಇವುಗಳು ಕೂಡ ಜೀರ್ಣಕ್ರಿಯೆಯ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು.
ದುರ್ಬಲ ಅಗ್ನಿಯ ಲಕ್ಷಣಗಳು
ಸೇವಿಸಿದ ಆಹಾರ ಜೀರ್ಣವಾಗದೆ ಇರುವುದು.
ಹೊಟ್ಟೆ ಉಬ್ಬರ
ಹುಳಿ ತೇಗು ಬರುವುದು
ಮಲಬದ್ಧತೆ ಮತ್ತು ಅತಿಸಾರ
ಹೊಟ್ಟೆ ನೋವು
ಸೋಮಾರಿತನ
ಅತಿಯಾದ ಸುಸ್ತು.
ದುರ್ಬಲ ಜೀರ್ಣಾಂಗದಿಂದ ಉಂಟಾಗುವ ರೋಗಗಳು
ಆಯುರ್ವೇದವು ಅಗ್ನಿಯನ್ನು ಅವರವರ ಪ್ರಕೃತಿಗೆ ತಕ್ಕಂತೆ ತೀಕ್ಷ್ಣಾಗ್ನಿ, ಮಂದಾಗ್ನಿ, ವಿಷಮಾಗ್ನಿ ಮತ್ತು ಸಮಾಗ್ನಿ ಎಂದು ವಿಂಗಡಿಸುತ್ತದೆ. ಇದನ್ನರಿತು ಜನರು ಅವರ ಪ್ರಕೃತಿ ಹಾಗೂ ಅಗ್ನಿಯ ಸ್ಥಿತಿಯನ್ನು ತಿಳಿದು ಆಹಾರ ಮತ್ತು ಜೀವನ ಶೈಲಿಯನ್ನು ರೂಡಿಸಿಕೊಳ್ಳದಿರುವ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ,ಅತಿಯಾದ ಬೊಜ್ಜು, PCOD, ಥೈರಾಯಿಡ್ ನ ಸಮಸ್ಯೆ, ರಕ್ತಹೀನತೆ ಮತ್ತು ಮುಂತಾದ ರೋಗಗಳ ಸಂಖ್ಯೆ ಹೆಚ್ಚಾಗುತ್ತಿವೆ.
ರಕ್ತಹೀನತೆ (Anemia)
ದುರ್ಬಲವಾದ ಅಗ್ನಿಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆೇ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳದೆ ಮತ್ತು ರಕ್ತದ ಉತ್ಪತ್ತಿಯು ಕ್ಷೀಣಿಸಿ ರಕ್ತ ಹೀನತೆ ಸಂಭವಿಸಬಹುದು.
ಸಂಧಿವಾತ/ಆಮವಾತ
ಅಪಕ್ವವಾದ ಆಹಾರ ದೇಹದಲ್ಲಿ ಸೇರಿಕೊಂಡು ವಿಷವಾಗಿ (toxin) ಶೇಖರಣೆಯಾಗುತ್ತದೆ.ಹೀಗೆ ಶೇಖರಣೆಯಾದ ಆಮಾವಿಷವು ದೇಹದ ವಿವಿಧ ಜೀವಕೋಶಗಳಿಗೆ ಸೇರಿ ತ್ರಿದೋಷಗಳನ್ನು ಅಸಮತೋಲನಗೊಳಿಸಿ ಸಕ್ಕರೆ ಖಾಯಿಲೆ, ಸಂಧಿವಾತ/ಆಮವಾತ ಹಾಗೂ ಚರ್ಮರೋಗಗಳಿಗೆ ಕಾರಣವಾಗುತ್ತದೆ.
ಮೆದುಳಿನ ಆರೋಗ್ಯ
ಜೀರ್ಣಾಂಗವನ್ನು ಎರಡನೆಯ ಮೆದುಳು ಎಂದು ಕರೆಯುತ್ತಾರೆ.ಮಾನಸಿಕ ಆರೋಗ್ಯಕ್ಕೆ ಹಾರ್ಮೋನ್ ಗಳ ಉತ್ಪತ್ತಿಗೆ ಜೀರ್ಣಾಂಗ ವ್ಯವಸ್ಥೆ ಸಹಕಾರಿಯಾಗಿದೆ. .ನಿಮ್ಮ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿದ್ದಲ್ಲಿ ಆತಂಕ(Anxiety),ಮಾನಸಿಕ ಖಿನ್ನತೆ(Depression),ಮಾನಸಿಕ ಒತ್ತಡ(Stress)ಇಂತಹ ಸಮಸ್ಯೆಗಳು ಹೆಚ್ಚಾಗಬಹುದು.
ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಲಹೆಗಳು
ನಿಮ್ಮ ಜೀರ್ಣಶಕ್ತಿಯನ್ನು ಅರಿತು ಆಹಾರ ಸೇವನೆಯನ್ನು ಮಾಡಬೇಕು.
ಹಸಿವಾದಾಗ ಆಹಾರವನ್ನು ಸೇವಿಸಬೇಕು.
ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರವೇ ಮುಂದಿನ ಆಹಾರವನ್ನು ಸೇವಿಸಬೇಕು.
ಊಟದಲ್ಲಿ ಮಜ್ಜಿಗೆ, ಮೊಸರನ್ನು ಬಳಸುವುದು.
ಜಂಕ್ ಫುಡ್,ಕಾರ್ಬೋನೇಟೆಡ್ ಡ್ರಿಂಕ್ಸ್ ಗಳ ಬಳಕೆಯನ್ನು ನಿಲ್ಲಿಸಬೇಕು.
ನಾರಿನಾಂಶ ಹೊಂದಿದ ಪದಾರ್ಥಗಳನ್ನು ಸೇವಿಸಬೇಕು.
ಆಯುರ್ವೇದವು ತಿಳಿಸಿದಂತೆ “ಅಗ್ನಿ ಸಮವಾಗಿದ್ದರೆ – ಆರೋಗ್ಯ” ಎಂಬ ತತ್ತ್ವವನ್ನು ಇಂದು ಆಧುನಿಕ ಸಂಶೋಧನೆ ದೃಢಪಡಿಸಿದೆ.ಜೀರ್ಣಾಂಗ ವ್ಯವಸ್ಥೆಯನ್ನು ಸಂರಕ್ಷಿಸಿ, ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಿ. ಆಯುರ್ವೇದದೊಂದಿಗೆ ಆರೋಗ್ಯವನ್ನು ಕಾಪಾಡೋಣ,10ನೇ ಆಯುರ್ವೇದ ದಿನಾಚರಣೆಯ ಶುಭಾಶಯಗಳು.
ದೈನಂದಿನ ಆರೋಗ್ಯ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಲು 8660885793 ಗೆ ಮೆಸೇಜ್ ಮಾಡಿ.
ಲೇಖಕರು: ಡಾ. ಪ್ರವೀಣ್ ಕುಮಾರ್. ಜಿ, ಆಯುರ್ವೇದ ವೈದ್ಯರು, ಹಗರಿಬೊಮ್ಮನಹಳ್ಳಿ.